ADVERTISEMENT

ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಜಿ. ಪರಮೇಶ್ವರ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 14:05 IST
Last Updated 27 ಅಕ್ಟೋಬರ್ 2025, 14:05 IST
<div class="paragraphs"><p>ಜಿ. ಪರಮೇಶ್ವರ&nbsp;</p></div>

ಜಿ. ಪರಮೇಶ್ವರ 

   

ಬೆಂಗಳೂರು: ‘ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಸೂಚಿಸಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿಯವರು ಹೇಳಿದ್ದರು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬ ಆಗಬಹುದು’ ಎಂದರು.

ADVERTISEMENT

‘ಅಂತಿಮ ವರದಿ ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ರಾಸಾಯನಿಕ ವಿಶ್ಲೇಷಣಾ ವರದಿಗಳನ್ನು ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.

ಸುಜಾತಾ ಭಟ್‌ ವಿಚಾರಣೆ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಬೆಳ್ತಂಗಡಿ ಕಚೇರಿಗೆ ಸುಜಾತಾ ಭಟ್‌ ಸೋಮವಾರ ವಿಚಾರಣೆಗೆ ಹಾಜರಾದರು.

ಮಗಳು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಣೆಯಾಗಿದ್ದಳು ಎಂದು ಸುಜಾತಾ ಭಟ್‌ ಎಸ್‌ಐಟಿಗೆ ದೂರು ನೀಡಿದ್ದರು. ಅದು ಸುಳ್ಳು ಎಂದು ವಿಚಾರಣೆ ವೇಳೆ ತಿಳಿದುಬಂದಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ಸಲುವಾಗಿ ಕಚೇರಿಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ಸುಜಾತಾ ಭಟ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು.

ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್‌ ಟಿ. ಹಾಗೂ ವಿಠಲ ಗೌಡ ಅವರಿಗೂ ಎಸ್‌ಐಟಿ ನೋಟಿಸ್‌ ಜಾರಿ ಮಾಡಿತ್ತು. ಈ ನಾಲ್ವರು ಸೋಮವಾರ ವಿಚಾರಣೆಗೆ ಹಾಜರಾಗಲಿಲ್ಲ. ಅವರ ಪರವಾಗಿ ವಕೀಲರೊಬ್ಬರು ಎಸ್‌ಐಟಿ ಕಚೇರಿಗೆ ಭೇಟಿ ನೀಡಿದರು.

‘ನೋಟಿಸ್‌ ಪಡೆದ ನಾಲ್ವರು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ನೀಡಬೇಕು ಎಂದು ಅವರ ವಕೀಲರು ಕೋರಿದ್ದಾರೆ. ಅವರಿಗೆ ಕಾಲಾವಕಾಶ ನೀಡುತ್ತೇವೆ. ಆ ಬಳಿಕವೂ ಅವರು ವಿಚಾರಣೆಗೆ ಹಾಜರಾಗದಿದ್ದರೆ ಮತ್ತೆ ನೋಟಿಸ್‌ ಜಾರಿ ಮಾಡುತ್ತೇವೆ. ಐವರಿಂದ ಖುದ್ದಾಗಿ ಹೇಳಿಕೆ ಪಡೆಯಬೇಕಿದೆ. ಎಸ್‌ಐಟಿ ಈಚೆಗೆ ಕಲೆ ಹಾಕಿರುವ ಹೆಚ್ಚುವರಿ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವ ಹಾಗೂ ಅವರು ಪ್ರಕರಣದಲ್ಲಿ ಎಷ್ಟರಮಟ್ಟಿಗೆ ಶಾಮೀಲಾಗಿದ್ದಾರೆ ಎಂಬುದನ್ನು ತಿಳಿಯುವ ದೃಷ್ಟಿಯಿಂದಲೂ ತುಂಬಾ ಮಹತ್ವದ್ದು’ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ, ನ್ಯಾಯಾಲಯಕ್ಕೆ ಸಲ್ಲಿಸಲಿರುವ ಆರಂಭಿಕ ತನಿಖಾ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತವನ್ನು ತಲುಪಿದೆ ಎಂದು ಮೂಲಗಳು ಹೇಳಿವೆ.

ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ

ಮಂಗಳೂರು: ‘ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಿಂಗಳಾಂತ್ಯಕ್ಕೆ ವರದಿ ಕೊಡಬಹುದು ಎಂದು ಗೃಹ ಸಚಿವರು ಹೇಳಿದ್ದಾರೆ. ತನಿಖೆ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಹೇಳಿದರು.

‘ಎಸ್‌ಐಟಿ ತಿಂಗಳಾಂತ್ಯಕ್ಕೆ ವರದಿ ಕೊಡಬಹುದು, ಕೊಡದೇ ಇರಬಹುದು’ ಎಂದೂ ಅವರು ಪ್ರತಿಕ್ರಿಯಿಸಿದರು.‌

‘ದ್ವೇಷ ಭಾಷಣ ಮಾಡಿದರೆ ಕ್ರಮ’

ಯಾರೇ ದ್ವೇಷ ಭಾಷಣ ಮಾಡಿದರೂ ಅವರ ವಿರುದ್ಧ ಎಫ್‌ಐಆರ್‌
ದಾಖಲಿಸಲಾಗುತ್ತದೆ. ದ್ವೇಷ– ಅಸೂಯೆ ಹುಟ್ಟುಹಾಕಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.