ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದ (ಎಸ್ ಐಟಿ) ತನಿಖೆ ಮುಂದುವರಿದಿದ್ದು, ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಸೋಮವಾರ ಸದನದಲ್ಲಿ ಉತ್ತರಿಸಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶುಕ್ರವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸದನದಲ್ಲಿ ಈ ಬಗ್ಗೆ ಮಾತನಾಡಬಹುದು ಎಂದರು.
ಸತ್ಯವನ್ನು ಪತ್ತೆ ಹಚ್ಚಲು ಎಸ್ ಐಟಿಯವರು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ಗೃಹ ಸಚಿವರು ಉತ್ತರ ನೀಡಲಿದ್ದಾರೆ ಎಂದರು.
ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಮೃತ ದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಿರುವ ಪ್ರಕರಣವು
ಇಡೀ ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆರೋಪಗಳು ಗಂಭೀರ ಸ್ವರೂಪದ್ದಾಗಿರುವ ಕಾರಣ ಎಸ್ ಐಟಿ ರಚಿಸಲಾಗಿದೆ. ನಿಜಾಂಶ ಹೊರಬರಬೇಕು ಎಂಬುದೇ ಎಸ್ ಐಟಿ ರಚನೆಯ ಉದ್ದೇಶವಾಗಿದೆ.
ತನಿಖೆ ಉತ್ತಮವಾಗಿ ನಡೆಯುತ್ತಿರುವುದರಿಂದ ಯಾರಿಗೂ ತನಿಖೆ ಬಗ್ಗೆ ಅನುಮಾನವಿಲ್ಲ. ಸತ್ಯಾಂಶವನ್ನು ನಾವು ಜನರ ಮುಂದೆ ಇಡುತ್ತೇವೆ. ಯಾರ್ಯಾರೋ ಹೇಳಿದ್ದಕ್ಕೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದರ ಹಿಂದೆ ಷಡ್ಯಂತ್ರ ಇದ್ದರೆ ಅದನ್ನು ಕೂಡ ಪರಿಗಣಿಸಬೇಕಾಗುತ್ತದೆ.
ಯಾವುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಎಲ್ಲ ಸಂಗತಿಗಳನ್ನು ತನಿಖೆ ಮೂಲಕವೇ ತಿಳಿದುಕೊಳ್ಳಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಸುಕುಧಾರಿ ವ್ಯಕ್ತಿ ಹೆಚ್ಚುವರಿ ಸ್ಥಳ ತೋರಿಸಿದಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಎಸ್ ಐಟಿ ಅಧಿಕಾರಿಗಳು ನಿರ್ಧರಿಸುತ್ತಾರೆ. ಮಳೆಯ ನಡುವೆ ಕಾಡಿನ ಪ್ರದೇಶಕ್ಕೆ ಹೋಗಿ ಕಾರ್ಯಾಚರಣೆ ನಡೆಸುವುದು ಸುಲಭದ ಕೆಲಸವಲ್ಲ. ಪೊಲೀಸರಿಗೂ ತೊಂದರೆಯಾಗಿದೆ. ಆದರೆ ಅವರು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.
ಅವರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಬಹುದು ಎಂದರು.
ಬಿಜೆಪಿ ರಾಜಕೀಯ ಲಾಭ ನೋಡುವ ಪಕ್ಷ. ಎಸ್ ಐಟಿ ಕಾರ್ಯಾಚರಣೆಯ ಆರಂಭದ ಹತ್ತು ದಿನಗಳಲ್ಲಿ ಯಾರೂ ಬಾಯಿ ಬಿಚ್ಚಿಲ್ಲ. ಎಸ್ ಐಟಿ ರಚಿಸಲಿ ಎಂದು ಅವರೂ ಹೇಳಿಕೆ ನೀಡಿದರು. ಈಗ ಎಲ್ಲ ಸಂಗತಿಗಳೂ ಹೊರ ಬಂದ ಮೇಲೆ ರಾಜಕೀಯ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂದು ಬಿಜೆಪಿಯವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಧಾರ್ಮಿಕ ವಿಚಾರ ಉಪಯೋಗಿಸಿಕೊಂಡು ರಾಜಕೀಯ ಲಾಭ ಪಡೆಯುವುದು ಬಿಜೆಪಿ ಹಳೆಯ ತಂತ್ರ ಎಂದು ಆರೋಪಿಸಿದರು.
ಅನೇಕ ವ್ಯಕ್ತಿಗಳು, ಸಂಘಟನೆಗಳು ಜೊತೆಗೆ ಎಡಪಂಥೀಯ ಸಂಘಟನೆಗಳು ಅನೇಕ ಜನರು ತನಿಖೆಗೆ ಒತ್ತಡ ಹಾಕಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಹ ಎಸ್ ಐಟಿ ಆದರೆ ಒಳ್ಳೆಯದು ಎಂದು ಹೇಳಿದ್ದರು.
ದಕ್ಷಿಣ ಕನ್ನಡ ಪೊಲೀಸರೇ ತನಿಖೆ ನಡೆಸುತ್ತಾರೆ, ಎಸ್ ಐಟಿ ಅವಶ್ಯಕತೆ ಇಲ್ಲ ಎಂದು ನಾನು ಹೇಳಿದ್ದೆ. ಈಗ ನೋಡಿದರೆ ಎಸ್ ಐಟಿ ರಚನೆ ಮಾಡಿದ್ದು ಒಳ್ಳೆಯದೇ ಆಯಿತು. ಯಾರಿಗೂ ಅನುಮಾನ ಇರುವುದಿಲ್ಲ. ಪೊಲೀಸರ ಮೇಲೆ ಗೂಬೆ ಕೂರಿಸಲು ಸಾಧ್ಯವಿಲ್ಲ. ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.
ದೇವಸ್ಥಾನದ ಪಾವಿತ್ರ್ಯತೆ ಎಲ್ಲೂ ಧಕ್ಕೆಯಾಗಿಲ್ಲ. ಕಾಡಿನಲ್ಲಿ ಅಗೆಯುವ ಕಾರ್ಯ ನಡೆದಿದೆ. ಬಿಜೆಪಿಯವರು ಬೇಕಂತಲೇ ವಿಷಯವನ್ನು ತಿರುಚುತ್ತಿದ್ದಾರೆ. ಈ ಮೂಲಕ ಧರ್ಮಸ್ಥಳ ದ ಹೆಸರನ್ನು ಅವರೇ ಹಾಳು ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.