ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನನ್ನು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯವು ಇದೇ 6ರವರೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿದೆ.
ತಮ್ಮ ವಶದಲ್ಲಿದ್ದ ಸಾಕ್ಷಿ ದೂರುದಾರನನ್ನು ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರು ಪಡಿಸಿದರು. ಹೆಚ್ಚಿನ ವಿಚಾರಣೆಗೆ ಸಲುವಾಗಿ ಆತನನ್ನು ಮತ್ತಷ್ಟು ದಿನ ಎಸ್‌ಐಟಿ ವಶಕ್ಕೆ ಒಪ್ಪಿಸುವಂತೆ ಸರ್ಕಾರಿ ವಕೀಲರು ಬೇಡಿಕೆ ಸಲ್ಲಿಸಿದರು. ಈ ಕೋರಿಕೆಯನ್ನು ಮನ್ನಿಸಿದ ನ್ಯಾಯಾಲಯವು ಸೆ. 6ರವರೆಗೆ ಆತನನ್ನು ಎಸ್‌ಐಟಿ ವಶಕ್ಕೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷಿ ದೂರುದಾರನನ್ನು ನ್ಯಾಯಾಲಯದಿಂದ ನೇರವಾಗಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದರು. ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹಾಗೂ ಅಲ್ಲಿಂದ ಆತನನ್ನು ಕಚೇರಿಗೆ ಕರೆದೊಯ್ಯುವಾಗಲೂ ಮುಖಕ್ಕೆ ಮುಸುಕು ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.