ವಿಧಾನ ಪರಿಷತ್ ಸಭಾಂಗಣದಲ್ಲಿ ಗುರುವಾರ ನಡೆದ ಕಲಾಪದಲ್ಲಿ ಉಪಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ಮಾತನಾಡಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬುಡಕ್ಕೆ ಕೈಹಾಕಿದ್ದೀರಿ. ಮಂಜುನಾಥನ ಸನ್ನಿಧಿಗೆ ಕೈ ಹಾಕಿದರೆ ಸುಮ್ಮನಿರಲು ಸಾಧ್ಯವಿಲ್ಲ. ಆಗ ನಿಮ್ಮ ಬುಡವೇ ಅಲ್ಲಾಡುತ್ತದೆ’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ನಿಯಮ 69ರಡಿ ಗುರುವಾರ ವಿಷಯ ಪ್ರಸ್ತಾಪಿಸಿದ ಅವರು, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ನಂಬಿಕೆ ಹರಣ ನಡೆಯುತ್ತಿದೆ. ಇದಕ್ಕೆ ಸಂವಿಧಾನ ಮತ್ತು ಕಾನೂನಿನ ನೆರಳು ಪಡೆಯುತ್ತಿದ್ದಾರೆ. ಧರ್ಮಸ್ಥಳ, ಮಂಜುನಾಥಸ್ವಾಮಿ, ವೀರೇಂದ್ರ ಹೆಗ್ಗಡೆ ವಿರುದ್ಧ ಇಷ್ಟೊಂದು ಅಪಪ್ರಚಾರ ನಡೆಯುತ್ತಿರುವಾಗ ಅದನ್ನು ತಡೆಯಲು ಸರ್ಕಾರ ಮುಂದಾಗಿಲ್ಲ. ಸರ್ಕಾರವೇ ಈ ಗುಂಪುಗಳಿಗೆ ಒತ್ತಾಸೆಯಾಗಿ ನಿಂತಿದೆಯೋ ಎಂಬ ಅನುಮಾನ ಬರುತ್ತಿದೆ’ ಎಂದು ಹೇಳಿದರು.
‘ಮುಸುಕುಧಾರಿ ವ್ಯಕ್ತಿ ಪೊಲೀಸ್ ಇಲಾಖೆಗೆ ಮಂಕುಬೂದಿ ಎರಚುತ್ತಿದ್ದಾನೆ. ಈತ ತನಗೆ ಬೇಕಾದ ಹಾಗೆ ಎಸ್‌ಐಟಿಯನ್ನು ಕುಣಿಸುತ್ತಿದ್ದಾನೆ. ಅಧಿಕಾರಿಗಳೂ ಆತನ ಮಾತು ಕೇಳುತ್ತಿದ್ದಾರೆ. ಈತ ಯಾರು, ಈತನ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಮತ್ತು ಹಿಂದುತ್ವದ ಕುರಿತ ಅವಹೇಳನಕಾರಿ ಮಾತುಗಳನ್ನು ಕೇಳಿದಾಗ ರಕ್ತ ಕುದಿಯುತ್ತದೆ. ಅಪ ಪ್ರಚಾರ ಮಾಡುತ್ತಿರುವವರ ಬಗ್ಗೆ ಏಕೆ ಎಫ್‌ಐಆರ್ ದಾಖಲಿಸಿಲ್ಲ’ ಎಂದು ಪ್ರಶ್ನಿಸಿದರು.
‘ನಮ್ಮ ಜಿಲ್ಲೆಯಲ್ಲಿ ಅಧಿಕಾರಿಯಾಗಿದ್ದ, ಈಗ ನೆರೆ ರಾಜ್ಯದಿಂದ ನಿಮ್ಮ ಪಕ್ಷದಿಂದ ಜನಪ್ರತಿನಿಧಿಯಾಗಿರುವ ವ್ಯಕ್ತಿ ಈ ಷಡ್ಯಂತ್ರದಲ್ಲಿದ್ದಾನೆ ಎಂಬ ವಿಚಾರ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಧರ್ಮಸ್ಥಳಕ್ಕೂ ಎಸ್‌ಡಿಪಿಐಗೆ ಏನು ಸಂಬಂಧ? ಅವರೇಕೆ ಅಲ್ಲಿ ಪ್ರತಿಭಟನೆ ನಡೆಸಬೇಕು? ಹಲವು ವ್ಯಕ್ತಿಗಳಿಗೆ ವಿದೇಶಗಳಿಂದ ಹಣ ಬರುತ್ತಿದೆ? ವಿದೇಶಿ ಅಲ್‌ಜಝೀರಾ ಚಾನೆಲ್‌ಗೆ ಅಲ್ಲೇನು ಕೆಲಸ’ ಎಂದೂ ಸುನಿಲ್‌ಕುಮಾರ್ ಕೇಳಿದರು.
‘ತಿರುಪತಿ, ಶಬರಿಮಲೈ, ಶನಿಶಿಂಗ್ಣಾಪುರ, ತಿರುವನಂತಪುರ ದೇಗುಲಗಳ ನಂತರ ನಗರ ನಕ್ಸಲರು ಮತ್ತು ಎಡಚರ ಗ್ಯಾಂಗ್ ಧರ್ಮಸ್ಥಳಕ್ಕೆ ಕೈ ಹಾಕಿದೆ. ಬಾಹುಬಲಿ ಬೆಟ್ಟದ ಬುಡಕ್ಕೂ ಕೈಹಾಕಿದೆ. ಮಂಜುನಾಥನ ಸನ್ನಿಧಿಗೆ ಕೈ ಹಾಕಿದರೆ ಸುಮ್ಮನಿರಲು ಸಾಧ್ಯವಿಲ್ಲ. ಆಗ ನಿಮ್ಮ ಬುಡವೇ ಅಲ್ಲಾಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿದ್ದೀರಾ? ಇದರಲ್ಲಿ ನಿಮ್ಮ ಹೈಕಮಾಂಡ್ ನಿರ್ದೇಶನ ಇದೆಯೇ? ಇಂಡಿ ಒಕ್ಕೂಟದ ರಹಸ್ಯ ಕಾರ್ಯಸೂಚಿ ಏನಾದರೂ ಇದೆಯಾ’ ಎಂದು ಪ್ರಶ್ನಿಸಿದರು.
ಸೌಜನ್ಯಾ ಕೊಲೆ ಪ್ರಕರಣದ ತನಿಖೆಯು ತಾರ್ಕಿಕ ಅಂತ್ಯವನ್ನು ಏಕೆ ತಲುಪುತ್ತಿಲ್ಲ. ಮುಖ್ಯಮಂತ್ರಿ ಈ ಸಂಬಂಧ ಸದನದಲ್ಲಿ ಉತ್ತರ ನೀಡಬೇಕುಹರೀಶ್ ಪೂಂಜಾ, ಬಿಜೆಪಿ
ಭಕ್ತರ ಮನಸ್ಸಿನಲ್ಲಿ ಗೊಂದಲ ಉಂಟಾಗುವ ಕೆಲಸ ನಡೆದಿದೆ. ಇದಕ್ಕೆ ತೆರೆ ಎಳೆಯುವ ಕೆಲಸ ಆಗಬೇಕು. ನಮ್ಮ ಪಕ್ಷ ಧರ್ಮಸ್ಥಳಕ್ಕೆ ವಿರೋಧವಾಗಿಲ್ಲಅಶೋಕ ಕುಮಾರ್ ರೈ, ಕಾಂಗ್ರೆಸ್
ಹಿಂದೂ ಧರ್ಮ ಹಲವು ಸವಾಲುಗಳನ್ನು ಗೆದ್ದು ಬಂದಿದೆ. ಅದೇ ರೀತಿ ಧರ್ಮಸ್ಥಳವೂ ಸವಾಲುಗಳನ್ನು ಗೆದ್ದು ಹೊರಬರುತ್ತದೆ. ಅಪಪ್ರಚಾರ ನಡೆಸುವ ಯೂಟ್ಯೂಬರ್‌ಗಳನ್ನು ನಿಯಂತ್ರಿಸಬೇಕುಡಾ.ರಂಗನಾಥ್, ಕಾಂಗ್ರೆಸ್
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಶಿಕ್ಷೆ ಕೊಡಿ. ಮುಸುಕುಧಾರಿ ತಪ್ಪಿತಸ್ಥನಾದರೆ ಗಲ್ಲಿಗೇರಿಸಿಎಸ್.ಆರ್.ವಿಶ್ವನಾಥ್, ಬಿಜೆಪಿ
‘ತನಿಖೆಯಲ್ಲಿ ಶವಗಳು ಸಿಗದೇ ಇದ್ದಾಗ, ಕೊನೆಯಲ್ಲಿ ಆ ‘ಮಾಸ್ಕ್ ಮ್ಯಾನ್ ಹುಚ್ಚ’ ಎಂದು ಷರಾ ಬರೆಯುವುದಕ್ಕೂ ಮೊದಲೇ ಆತನನ್ನು ತನಿಖೆಗೆ ಒಳಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು.
‘ತನಿಖೆಗಾಗಿ ಹಿಟಾಚಿ, ಜೆಸಿಬಿ ಮತ್ತಿತರ ಆಧುನಿಕ ಸಾಧನಗಳನ್ನು ಬಳಸಲಾಗಿದೆ. ಆತನ ಭದ್ರತೆಗಾಗಿ ಮಷಿನ್‌ಗನ್ ಬಳಸುತ್ತಿದ್ದಾರೆ. ಹೀಗಾಗಿ ಮುಸುಕುಧಾರಿ ಯಾರೆಂಬುದು ಜನರಿಗೆ ತಿಳಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಮುಸುಕುಧಾರಿ ವ್ಯಕ್ತಿಯ ಹೆಸರು ಚಿನ್ನಯ್ಯ, ಆತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವನು ಎಂದು ಜನ ಹೇಳುತ್ತಿದ್ದಾರೆ. ಪೊಲೀಸರು ಪ್ರತಿದಿನ ಆತನಿಗೆ ಮೇಕಪ್ ಮಾಡಿ, ಬಿರಿಯಾನಿ ತಿನ್ನಿಸಿ, ಸಂಪೂರ್ಣ ಭದ್ರತೆ ನೀಡಿ ಕರೆದೊಯ್ಯುತ್ತಿದ್ದಾರೆ. ಆತ ಇವೆಲ್ಲವನ್ನೂ ಎಂಜಾಯ್ ಮಾಡುತ್ತಿದ್ದಾನೆ’ ಎಂದರು.
‘20 ಅಡಿ ಆಳದಲ್ಲಿ ಯಾರಾದರೂ ಹೆಣ ಹೂಳುತ್ತಾರಾ? ಒಬ್ಬ ವ್ಯಕ್ತಿ ಆರಡಿ ಅಗೆಯ ಬೇಕೆಂದರೂ ಬಹಳ ಕಷ್ಟ. ಆದರೆ, ಈ ವ್ಯಕ್ತಿ ಒಬ್ಬನೇ ಇಷ್ಟು ಕೆಲಸ ಮಾಡಿದ್ದಾನೆ ಎಂದರೆ, ಚಂದಾಮಾಮದಲ್ಲಿ ಬರುತ್ತಿದ್ದ ವಿಕ್ರಮ ಬೇತಾಳ ಕಥೆ ನೆನಪಿಗೆ ಬರುತ್ತದೆ. ಈತ ಒಬ್ಬನೇ ಕಾಡಿಗೆ ಹೆಣವನ್ನು ಹೊತ್ತುಕೊಂಡು ಹೋಗಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ. ಈಗ ಅಗೆದಿರುವ ಹೊಂಡಗಳನ್ನು ಕೃಷಿ ಹೊಂಡ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು ಅಶೋಕ ವ್ಯಂಗ್ಯವಾಡಿದರು.
‘ಕೋಟಿ ಜನರ ಭಾವನೆಗಳ ಜತೆ ಆಡಬೇಡಿ’
ನನ್ನ ಬಂಧು ಧರ್ಮಸ್ಥಳ ಮಂಜುನಾಥ, ನನ್ನ ಭಾವನೆ ಗಳ ಜತೆ ಆಟ ಆಡಬೇಡಿ. ಕೋಟಿಗಟ್ಟಲೆ ಜನ ಇದೇ ರೀತಿ ಭಾವನೆ ಹೊಂದಿದ್ದಾರೆ. ಒಬ್ಬ ವಕೀಲ ಕೇರಳ ಸರ್ಕಾರಕ್ಕೆ ಪತ್ರ ಬರೆದು, ಈ ಪ್ರಕರಣದಲ್ಲಿ ಕರ್ನಾಟಕಕ್ಕೆ ನೆರವಾಗ ಬೇಕು ಎಂದಿದ್ದಾನೆ. ಹೀಗಾಗಿ ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಧರ್ಮಸ್ಥಳಕ್ಕೆ ಬುಲ್ಡೋಜರ್ ಹತ್ತಿಸಬೇಕು ಎಂದು ಹೇಳಿರುವ ವ್ಯಕ್ತಿ ಹಿಂದೆ ಶಾಸಕರ ಭವನಕ್ಕೆ ಬಾಂಬ್ ಇಟ್ಟಿದ್ದ, ನಿತ್ಯವೂ ಪ್ರಚೋದನಕಾರಿಯಾಗಿ ಮಾತನಾಡುವ ಈತನ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?ಎಸ್.ಸುರೇಶ್‌ಕುಮಾರ್, ರಾಜಾಜಿನಗರ ಶಾಸಕ
‘ನಗರ ನಕ್ಸಲರು ಹಿಂದಿದ್ದಾರೆ’
ಇಡೀ ಪ್ರಕರಣದ ಹಿಂದೆ ನಗರ ನಕ್ಸಲರು ಇದ್ದಾರೆ. ಇವರ ಒತ್ತಡದ ಕಾರಣ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ. ಇವರು ನಿಮ್ಮ (ಮುಖ್ಯಮಂತ್ರಿ) ಹಿಂದೆ ಮುಂದೆ ಏಕೆ ಓಡಾಡಿಕೊಂಡಿದ್ದಾರೆ. ಹಲವು ವಕೀಲರು ಇದರಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರಿಗೆ ಹಣಕಾಸು ನೆರವು ನೀಡುತ್ತಿರುವವರು ಯಾರು? ಕುದುರೆಮುಖ ಉಳಿಸಿ ಆಂದೋಲನ ಉಳಿಸಿ ಎಂದು ಹೋರಾಟ ಆರಂಭಿಸಿದ್ದು ಇದೇ ಶಕ್ತಿಗಳುಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ
ಧರ್ಮಸ್ಥಳ ಮುಟ್ಟಿದರೆ ಕ್ರಾಂತಿ ಆಗುತ್ತದೆ
ಹಿಂದೆ ಮೊಘಲರು ಹಿಂದೂ ಧರ್ಮ ನಾಶ ಮಾಡಲು ಪ್ರಯತ್ನಿಸಿದ್ದರು. ಈಗ ಆಧುನಿಕ ಮೊಘಲರು, ಬುದ್ಧಿಜೀವಿಗಳು, ಎಡಚರು, ಢೋಂಗಿ ಜಾತ್ಯತೀತರು ಆ ಕೆಲಸ ಮಾಡುತ್ತಿದ್ದಾರೆ. ವಿದೇಶಿ ಹಣವನ್ನು ಪಡೆದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಧರ್ಮಸ್ಥಳವನ್ನು ಮುಟ್ಟಲು ಹೋದರೆ ದೊಡ್ಡ ಕ್ರಾಂತಿ ಆಗುತ್ತದೆ. ಸರ್ಕಾರ ಕೊನೆಯ ದಿನ ಎಣಿಸಬೇಕಾಗುತ್ತದೆಬಸನಗೌಡ ಪಾಟೀಲ ಯತ್ನಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.