ಧರ್ಮಸ್ಥಳ ಪ್ರಕರಣ
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹ ಪತ್ತೆಗೆ ಜಾಗ ಅಗೆಯುವ ಕಾರ್ಯಕ್ಕೆ ನೀರಿನ ಒರತೆ ಅಡ್ಡಿಯಾಗಿದೆ.
ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ, ನೇತ್ರಾವತಿ ನದಿಯ ಪಕ್ಕದಲ್ಲೇ ಇದೆ. ನದಿಗೂ ಈ ಜಾಗಕ್ಕೂ 10 ಮೀಟರ್ ಅಂತರವೂ ಇಲ್ಲ. ಇಲ್ಲಿ ಅಗೆದಂತೆ ನೀರು ಒಸರುತ್ತಿದೆ. ಹಾಗಾಗಿ ಜೆಸಿಬಿಯನ್ನು ಸ್ಥಳಕ್ಕೆ ತರಿಸಿ ಅಗೆಯುವ ಕಾರ್ಯ ಮುಂದುವರಿಸಲು ಎಸ್ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸಾಕ್ಷಿ ದೂರುದಾರ ಮೊದಲು ತೋರಿಸಿದ ಜಾಗದಲ್ಲಿ ಅಗೆಯುವ ಕಾರ್ಯವನ್ನು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭಿಸಲಾಗಿತ್ತು.
'ಸುಮಾರು 3 ಅಡಿ ಆಳದವರೆಗೆ ಅಗೆಯಲಾಗಿದೆ. ಮೃತದೇಹದ ಕುರುಹುಗಳು ಇದುವರೆಗೂ ಸಿಕ್ಕಿಲ್ಲ. ಮಣ್ಣು ಅಗೆದಂತೆ ನೀರು ಒಸರುತ್ತಿದೆ. ಹಾಗಾಗಿ ಜೆಸಿಬಿ ತರಿಸಿ ಅಗೆಯುವ ಕಾರ್ಯ ಮುಂದುವರಿಸಲಾಗುತ್ತದೆ' ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
'ಸಾಕ್ಷಿ ದೂರುದಾರನಿಗೆ ತೃಪ್ತಿಯಾಗುವವರೆಗೆ ಹಾಗೂ ನಮಗೂ ಇನ್ನು ಅಗೆಯುವ ಅಗತ್ಯವಿಲ್ಲ ಎಂದು ನಮಗೂ ಮನವರಿಕೆ ಆಗುವವರೆಗೆ ಅಗೆಯುವ ಕಾರ್ಯ ಮುಂದುವರಿಸಲಿದ್ದೇವೆ. ಸದ್ಯಕ್ಕೆ ಒಂದೇ ಜಾಗವನ್ನು ಅಗೆದಿದ್ದೇವೆ. ಇದು ಪೂರ್ಣಗೊಂಡ ಬಳಿಕವೇ ಬೇರೆ ಜಾಗದಲ್ಲಿ ಅಗೆಯುವ ಕಾರ್ಯ ಆರಂಭಿಸಲಿದ್ದೇವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ಐಟಿಯ ಡಿಐಜಿ ಎಂ.ಎನ್.ಅನುಚೇತ್ ಹಾಗೂ ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.