ಧರ್ಮಸ್ಥಳ ಪ್ರಕರಣ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಲ್ಲಿ ಶೋಧ ಕಾರ್ಯ ಹಾಗೂ ಮಹಜರು ಕಾರ್ಯವನ್ನು ಗುರುವಾರವೂ ಮುಂದುವರಿಸಿದೆ.
ಕಾಡಿನಲ್ಲಿ ಬುಧವಾರ ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ ಹಲವೆಡೆ ನೆಲದ ಮೇಲೆಯೇ ಮೃತದೇಹಗಳ ಅವಶೇಷಗಳು ಸಿಕ್ಕಿವೆ. ಅವುಗಳ ಮಹಜರು ಕಾರ್ಯ ಪೂರ್ಣಗೊಂಡಿರಲಿಲ್ಲ. ರಾತ್ರಿ ಸುಮಾರು 7 ಗಂಟೆವರೆಗೂ ಎಸ್‌ಐಟಿ ತಂಡ ಕಾಡಿನಲ್ಲೇ ಇತ್ತು. ಕಾಡಿನಲ್ಲಿ 9 ಕಡೆ ಮೃತದೇಹಗಳ ಅವಶೇಷ ಸಿಕ್ಕಿದ್ದು, ಅವುಗಳಲ್ಲಿ ಐದು ಕಡೆ ಮಾತ್ರ ಮಹಜರು ನಡೆಸಲಾಗಿತ್ತು ಎಂಬ ಮಾಹಿತಿ ಇದೆ. ಗುರುವಾರ ಮಹಜರು ಪೂರ್ಣಗೊಳಿಸಿ ಇನ್ನಷ್ಟು ಕಡೆ ಶೋಧ ನಡೆಸುವ ಸಾಧ್ಯತೆ ಇದೆ.
ಎಸ್‌ಐಟಿ ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆಳ್ತಂಗಡಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಕಾಡಿನೊಳಗೆ ತೆರಳಿದ್ದಾರೆ.
ಈ ಪ್ರಕರಣದ ಸಾಕ್ಷಿ ದೂರುದಾರ ಪೊಲೀಸರಿಗೆ ತಲೆಬುರುಡೆಯನ್ನು ಒಪ್ಪಿಸಿದ್ದ. ಆದರೆ, ಅದನ್ನು ಹೊರತೆಗೆದದ್ದು ‘ನಾನಲ್ಲ’ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು. ಆ ತಲೆಬುರುಡೆ ಇದ್ದ ಜಾಗವನ್ನು ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ತೋರಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಎಸ್‌ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಕೆಲ ದಿನಗಳ ಹಿಂದೆ ಕಾಡಿನ ಒಳಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ನೆಲದ ಮೇಲೆಯೇ ಕೆಲವೆಡೆ ಮೃತದೇಹಗಳ ಅವಶೇಷ ಕಂಡು ಬಂದಿತ್ತು. ಹಾಗಾಗಿ ಕಾಡಿನಲ್ಲಿ ಶೋಧ ಕಾರ್ಯ ನಡೆಸಲು ಎಸ್‌ಐಟಿ ನಿರ್ಧರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.