ಬೆಂಗಳೂರು: ‘ಧರ್ಮಸ್ಥಳದ ಬಗ್ಗೆ ನಮಗೂ ಗೌರವವಿದೆ. ಆದರೆ, ಆಪಾದನೆ ಬಂದಾಗ ಸತ್ಯ ಹೊರ ಬರಬೇಕು. ಒಂದು ವೇಳೆ ಆರೋಪ ಸುಳ್ಳಾದರೆ ಆರೋಪಿಸಿದ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸುವ ಅಧಿಕಾರವಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ವಿಧಾನಸಭೆಯಲ್ಲಿ ಧರ್ಮಸ್ಥಳದ ಮೇಲಿನ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ‘ಎಸ್‌ಐಟಿಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಲಾಗಿದೆ. ಯಾವುದೇ ಅಧಿಕಾರಿಗೂ ನಾನಾಗಲಿ ಮುಖ್ಯಮಂತ್ರಿಯಾಗಲಿ ಒಂದು ಫೋನ್ ಕರೆ ಕೂಡ ಮಾಡಿಲ್ಲ. ಸುಳ್ಳು ಆಪಾದನೆ ಮಾಡಿದವರನ್ನು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬಹುದಾಗಿದೆ’ ಎಂದರು.
‘ಸರ್ಕಾರ ಯಾರ ಒತ್ತಡಕ್ಕೂ ಮಣಿದು ಎಸ್‌ಐಟಿ ರಚನೆ ಮಾಡಿಲ್ಲ. ಇಷ್ಟು ದೊಡ್ಡ ಆರೋಪ ಬಂದಾಗ ಸತ್ಯ ಹೊರಗೆ ಬರಲೇಬೇಕು, ನ್ಯಾಯ ಕೊಡಬೇಕು ಎಂಬ ಕಾರಣಕ್ಕೆ ಎಸ್‌ಐಟಿ ರಚನೆ ಮಾಡಲಾಗಿದೆ. ಧರ್ಮಸ್ಥಳ ಸಮಾಜಕ್ಕೆ ಹಲವು ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಆದ ಕಾರಣಕ್ಕೆ ವೀರೇಂದ್ರ ಹೆಗ್ಗಡೆ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಅಲ್ಲಿ ಹಲವು ಮಕ್ಕಳು ಜೀವನ ಕಟ್ಟಿಕೊಳ್ಳಲು ಶಿಕ್ಷಣ ನೀಡಿದ್ದಾರೆ. ಗ್ರಾಮೀಣ ಜನತೆಯ ಜೀವನ ಹಸನಾಗಲು ನೆರವಾಗಿದ್ದಾರೆ’ ಎಂದು ಪರಮೇಶ್ವರ ಅವರು ಹೇಳಿದರು.
‘ಆಪಾದನೆ ಬಂದಿದೆ. ತನಿಖೆ ಮಾಡದೇ ಇದ್ದರೆ ಆಪಾದನೆ ಹಾಗೇ ಉಳಿಯುತ್ತದೆ. ಸತ್ಯ ಶೋಧನೆ ಆಗಿ ಸತ್ಯ ಹೊರಬರಬೇಕು ಅಲ್ಲವೇ, ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಈ ಚರ್ಚೆಗೆ ಸೋಮವಾರ ಉತ್ತರ ನೀಡುತ್ತೇನೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.