ADVERTISEMENT

ಸೌಜನ್ಯ ಕೊಲೆ: ಮರು ತನಿಖೆಗೆ ಆಗ್ರಹ

ಸಿಬಿಐ ವಿಶೇಷ ಕೋರ್ಟ್‌ ಆದೇಶ ಪಾಲನೆಯಾಗಲಿl ಲೇಖಕಿಯರ ಸಮ್ಮೇಳನದಲ್ಲಿ ಎಂಟು ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 23:56 IST
Last Updated 23 ಮಾರ್ಚ್ 2025, 23:56 IST
<div class="paragraphs"><p>ಲೇಖಕಿಯರಾದ ಪ್ರೇಮಾ ಭಟ್, ಪಾರ್ವತಿ ಐತಾಳ್, ಲಲಿತಮ್ಮ ಚಂದ್ರಶೇಖರ್, ಸಮತಾ ದೇಶಮಾನೆ, ಇಂದಿರಾ ಶಿವಣ್ಣ ಅವರನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.&nbsp;&nbsp;</p></div>

ಲೇಖಕಿಯರಾದ ಪ್ರೇಮಾ ಭಟ್, ಪಾರ್ವತಿ ಐತಾಳ್, ಲಲಿತಮ್ಮ ಚಂದ್ರಶೇಖರ್, ಸಮತಾ ದೇಶಮಾನೆ, ಇಂದಿರಾ ಶಿವಣ್ಣ ಅವರನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.  

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ನಡೆಸಬೇಕು ಎಂಬ ಒತ್ತಾಯ ಸೇರಿದಂತೆ ಎಂಟು ನಿರ್ಣಯಗಳನ್ನು ಇಲ್ಲಿ ನಡೆದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು. 

ADVERTISEMENT

ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಸಮ್ಮೇಳನದ ಕಡೆಯ ದಿನವಾದ ಭಾನುವಾರ ಸಂಘದ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು ನಿರ್ಣಯ
ಗಳನ್ನು ವಾಚಿಸಿದರು.

‘ಹೆಣ್ಣು ಮಕ್ಕಳ ಅಸಹಜ ಸಾವು ಪ್ರಕರಣಗಳನ್ನು ಮರು ತನಿಖೆ ಮಾಡಬೇಕು. ಸೌಜನ್ಯ ಪ್ರಕರಣ
ದಲ್ಲಿ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಅಮಾಯಕ ಹುಡುಗಿಯರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

‘ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಹೆಣ್ಣನ್ನು ಆಟಿಕೆಯಂತೆ ಬಳಸಿಕೊಳ್ಳುವ ಕ್ರಮ ಖಂಡನೀಯ. ಸಾರ್ವಜನಿಕ ಜೀವನದಲ್ಲಿ ಹೆಣ್ಣನ್ನು ಇಲಿ ಹಿಡಿಯುವ ಬೋನಿನಂತೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಹಾಗೂ ಸದನದಲ್ಲಿ ಮಹಿಳೆಯರ ಕುರಿತು ಬಳಸುವ ಭಾಷೆ ಮತ್ತು ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಇದು ಅಸಾಂವಿಧಾನಿಕ ಮತ್ತು ಅನಾಗರಿಕ. ಈ ಬಗ್ಗೆ ಮಾಧ್ಯಮಗಳು ಹಾಗೂ ಜನಪ್ರತಿನಿಧಿಗಳ ಧೋರಣೆ ಬದಲಾಗಬೇಕು’ ಎಂದು ಒತ್ತಾಯಿಸಿದರು.

‘ಹೆಣ್ಣು ಕುಲದ ನಾಶಕ್ಕೆ ಕಾರಣವಾಗಿರುವ ಭ್ರೂಣಹತ್ಯೆ ನಿಯಂತ್ರಿಸಲು ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯಡಿ (ಪಿಸಿಪಿಎನ್‍ಡಿಟಿ) ಕಾನೂನು ಬಲಗೊಳಿಸಬೇಕು. ಈ ಪ್ರಕರಣಗಳ  ಇತ್ಯರ್ಥಕ್ಕಾಗಿ ತ್ವರಿತ ಕೋರ್ಟ್‌ ಸ್ಥಾಪನೆಯಾಗಬೇಕು’ ಎಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. 

‘ಮರ್ಯಾದೆಗೇಡು ಹತ್ಯೆ ಹೆಸರಿನಲ್ಲಿ ಯುವಕ–ಯುವತಿಯರು ದಮನಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ವಿವಾಹದ ಮೂಲಕ ಜಾತಿ, ಮತಗಳ ಭೇದವಿಲ್ಲದ ನವ ಸಮಾಜದ ಕನಸು ಕಾಣುವವರ ಮೇಲಿನ ದೌರ್ಜನ್ಯ ಖಂಡನೀಯ. ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಿಂಸೆ, ದೌರ್ಜನ್ಯಗಳ ತಡೆಗೆ ವಿ.ಎಸ್‌.ಉಗ್ರಪ್ಪ ನೇತೃತ್ವದ ಸಮಿತಿ ವರದಿಯನ್ನು ಅಂಗೀಕರಿಸಿ, ಶಿಫಾರಸುಗಳನ್ನು ಜಾರಿಮಾಡಬೇಕು’ ಎಂದು ಆಗ್ರಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.