ADVERTISEMENT

ಪರೀಕ್ಷೆ ಮುಂದೂಡಿಕೆಗೆ ಪ್ರಶ್ನೆಪತ್ರಿಕೆ ಸೋರಿಕೆ ಕಥೆ ಕಟ್ಟಿದ ವಿದ್ಯಾರ್ಥಿ ಡಿಬಾರ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 7:36 IST
Last Updated 14 ಮಾರ್ಚ್ 2020, 7:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಪರೀಕ್ಷೆ ಮುಂದೂಡಿಕೆಯಾಗಲಿ ಎಂಬ ಉದ್ದೇಶದಿಂದ ಪ್ರಶ್ನೆಪತ್ರಿಕೆಯೇ ಸೋರಿಕೆಯಾಗಿದೆ ಎಂದು ಕಥೆ ಕಟ್ಟಿದ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.

ನಿನ್ನೆ ರಾತ್ರಿ ವಿದ್ಯಾರ್ಥಿಯೊಬ್ಬನ ಕಿಡಿಗೇಡಿತನದಿಂದ ಕೊಂಚ ಗಲಿಬಿಲಿ ಉಂಟಾಯಿತು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ರಾತ್ರಿ ಪಿಯುಸಿ ಅಧಿಕಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ವಾಟ್ಸಪ್ ಸಂದೇಶ ಕಳುಹಿಸಿ ಇಂದು (ಶನಿವಾರ) ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯ ಕಂಪ್ಯೂಟರ್‌ ಸೈನ್ಸ್ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ. ಆದ್ದರಿಂದ ಬದಲಿ ಪ್ರಶ್ನೆ ಪತ್ರಿಕೆ ನೀಡಬೇಕು ಎಂದು ತಿಳಿಸಿದ್ದಾನೆ.

ADVERTISEMENT

ಈ ವಾಟ್ಸಪ್ ಸಂದೇಶದ ಆಧಾರದ ಮೇಲೆ ದೂರು ಸಲ್ಲಿಸಲಾಯಿತು. ದೂರಿನ ಆಧಾರದ ಮೇಲೆ ಬೆಂಗಳೂರು ಉತ್ತರ ಪೊಲೀಸರು ಪತ್ತೆ ಹಚ್ಚಿದಾಗ ಅದು ವಿದ್ಯಾರ್ಥಿಯೊಬ್ಬನ ನಂಬರ್ ಎಂದು ತಿಳಿದಿದೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇದರ ಹಿಂದಿನ ಅಸಲಿಯತ್ತು ಹೊರಬಂದಿದೆ.

'ನಾನು ಕಂಪ್ಯೂಟರ್ ಸೈನ್ಸ್ ವಿಷಯವನ್ನು ಸರಿಯಾಗಿ ಓದಿಲ್ಲವೆಂದು ಪರೀಕ್ಷೆಗಳನ್ನು ಮುಂದೂಡಿಸಲು ಹೀಗೆಮಾಡಿದೆ'ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.

ಆ ವಿದ್ಯಾರ್ಥಿಯ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಆತನನ್ನು ಡಿಬಾರ್ ಮಾಡಲಾಗಿದೆ. ಅಕಸ್ಮಾತ್ ಈ ವಿದ್ಯಾರ್ಥಿಯ ವಾಟ್ಸಪ್ ಸಂದೇಶ ವೈರಲ್ ಆಗಿದ್ದರೆ ಆಗುತ್ತಿದ್ದ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕಿ ಕನಗವಲ್ಲಿ ನೇತೃತ್ವದ ಪಿಯುಸಿ ಮಂಡಳಿಯ ಅಧಿಕಾರಿಗಳು ಮತ್ತು ಡಿಸಿಪಿ ಶಶಿಕುಮಾರ್ ನೇತೃತ್ವದ ಬೆಂಗಳೂರು ಉತ್ತರ ಪೋಲಿಸರ ಜಂಟಿ ಕಾರ್ಯಚರಣೆಯಿಂದ ಈ ಅನಾಹುತ ತಪ್ಪಿದೆ. ಆ ಅಧಿಕಾರಿಗಳಿಗೆ ಅಭಿನಂದನೆಗಳು. #ತಪ್ಪಿದ_ಅನಾಹುತ ಎಂದು ಹ್ಯಾಷ್‌ಟ್ಯಾಗ್ ಹಾಕಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ: ಪೋಷಕರ ಸಮೇತ ಬಾಲಕ ವಶಕ್ಕೆ

ಪಿಯುಸಿ ಪರೀಕ್ಷೆಯ ಕಂಪ್ಯೂಟರ್ ಸೈನ್ಸ್ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಂದೇಶ ಕಳುಹಿಸಿದ್ದ ವಿದ್ಯಾರ್ಥಿಯನ್ನು ಉತ್ತರ ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಯನಗರದ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಬಾಲಕ, ಪ್ರಶ್ನೆಪ್ರತ್ರಿಕೆ ಸೋರಿಕೆ ಬಗ್ಗೆ ಸುದ್ದಿ ಹಬ್ಬಿಸಿದ್ದ ಎನ್ನಲಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ಸಮೇತವೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.