ADVERTISEMENT

ಬಿಸಿನೀರು ಬಿದ್ದು ವಿದ್ಯಾರ್ಥಿಗೆ ಗಾಯ? ಪ್ರಕರಣ ದಾಖಲು

ಮಸ್ಕಿ: ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 21:00 IST
Last Updated 9 ಸೆಪ್ಟೆಂಬರ್ 2022, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನ‌ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಎರಡನೇ ತರಗತಿ ವಿದ್ಯಾರ್ಥಿ ಯೊಬ್ಬನ ಸೊಂಟದ ಸುತ್ತಲೂ ಸುಟ್ಟಗಾಯಗಳಾಗಿದ್ದು, ಆತ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ವಾರದ ಬಳಿಕ ಶುಕ್ರವಾರ ಗೊತ್ತಾಗಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಶಾಲೆಯಲ್ಲಿ ಮಲ–ಮೂತ್ರ ಮಾಡಿಕೊಂಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು ಚೆಲ್ಲಿದ್ದರಿಂದಾಗಿ ಗಾಯಗಳಾಗಿವೆ ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಿ, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗೆ ಸಮರ್ಪಕ ಚಿಕಿತ್ಸೆ ಕೊಡಿಸಬೇಕು' ಎಂದು ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಸುದರ್ಶನ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದು ಕೋರಿದ್ದಾರೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿಶ್ವನಾಥ ಅವರು ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಬಾಲಕ ಮತ್ತು ಪಾಲಕರಿಂದ ಮಾಹಿತಿ ಪಡೆದಿದ್ದಾರೆ. ‘ಪಾಲಕರು ಯಾರ ವಿರುದ್ಧವೂ ದೂರು ನೀಡದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಸ್ಕಿ ಪೊಲೀಸ್ ಠಾಣೆಗೆ ಕೋರಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‌‘ಶೌಚಾಲಯಕ್ಕೆ ಹೋಗಿದ್ದ ವೇಳೆ ಸೋಲಾರ್‌ ಹೀಟರ್‌ನ ನಳದಿಂದ ಬಂದ ಬಿಸಿ ನೀರು ಗಮನಿಸದೆ ಮೈಮೇಲೆ ಹಾಕಿಕೊಂಡಿದ್ದರಿಂದ ನನ್ನ ಮಗನಿಗೆ ಗಾಯ
ಗಳಾಗಿವೆ. ಇದರಲ್ಲಿ ನನ್ನ ಮಗನ ತಪ್ಪು ಇದೆ. ಹೀಗಾಗಿ, ನಾನು ಯಾರ ವಿರುದ್ಧವೂ ದೂರು ನೀಡಿಲ್ಲ’ ಎಂದು ವಿದ್ಯಾರ್ಥಿಯ ತಂದೆ ‘ಪ್ರಜಾವಾಣಿ’ಗೆ ತಿಳಿಸಿದರು.

***

ಶೌಚಾಲಯದಲ್ಲಿ ವಿದ್ಯಾರ್ಥಿಗೆ ಸೋಲಾರ್‌ ಹೀಟರ್‌ನ ಬಿಸಿ ನೀರಿನ ನಳ ಮತ್ತು ತಣ್ಣೀರಿನ ನಳ ಗೊತ್ತಾಗಿರಲಿಕ್ಕಿಲ್ಲ. ನಳದಿಂದ ಬಂದ ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡಿದ್ದರಿಂದ ಗಾಯಗಳಾಗಿವೆ. ವಿದ್ಯಾರ್ಥಿ ಇದೀಗ ಆರೋಗ್ಯದಿಂದ ಇದ್ದಾನೆ

- ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ

ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು ಹಾಕಿದ್ದಾರೆ ಎಂದು ದೂರು ಬಂದಿದೆ. ತನಿಖೆ ಮಾಡುವಂತೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮನ್ಸೂರ ಆಹ್ಮದ್ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.

- ಸಿದ್ಧರಾಮ ಬಿದರಾಣಿ, ಪಿಎಸ್‌ಐ, ಮಸ್ಕಿ ಪೊಲೀಸ್‌ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.