ADVERTISEMENT

‘ಡಿಜಿಟಲ್ ಟೆಲಿಮೆಟ್ರಿ’: ಕೊಳವೆಬಾವಿ ನೀರಿಗೆ ಶುಲ್ಕ

ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿ ಒಪ್ಪಿಕೊಂಡ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 22:39 IST
Last Updated 21 ಜುಲೈ 2025, 22:39 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ದುರ್ಬಳಕೆಯನ್ನು ತಡೆಯಲು ನಗರ ಪ್ರದೇಶಗಳಲ್ಲಿ ಕೊಳವೆಬಾವಿಯಿಂದ ತೆಗೆಯುವ ನೀರಿನ ಬಳಕೆ ಪ್ರಮಾಣವನ್ನು ಅಳೆಯಲು ‘ಡಿಜಿಟಲ್ ಟೆಲಿಮೆಟ್ರಿ’ ಅಳವಡಿಸಿ, ದರ ನಿಗದಿ ಮಾಡಲು ಸರ್ಕಾರ ಮುಂದಾಗಿದೆ.

‌ಅಂತರ್ಜಲ ಬಳಕೆಯನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರದ, ಕೇಂದ್ರ ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ಸಂಬಂಧ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಗೆ ಸಣ್ಣ ನೀರಾವರಿ ಇಲಾಖೆ ಮಂಡಿಸಿದ್ದ ‍ಪ‍್ರಸ್ತಾವನೆಗೆ ಸಭೆ ಅನುಮೋದನೆ ನೀಡಿದೆ. ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಗೆ ಕೆಲವು ತಿದ್ದುಪಡಿಗಳನ್ನು ತರಲು ರಾಜ್ಯ ಮುಂದಾಗಿದ್ದು, ಅದು ಸಿದ್ಧಗೊಂಡ ಬಳಿಕವಷ್ಟೆ ದರ ನಿಗದಿಯಾಗಲಿದೆ.

ADVERTISEMENT

ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮೂಲಸೌಕರ್ಯಗಳ ಅಭಿವೃದ್ದಿ, ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ, ಸಮೂಹ ಗೃಹ ಸಹಕಾರ ಸಂಘಗಳು ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯಗಳ ಅಂತರ್ಜಲ ಬಳಕೆಯ ಮೇಲೆ ಪ್ರತಿ ಕ್ಯುಬಿಕ್ ಮೀಟರ್‌ಗೆ ₹1ರಿಂದ ₹35ರವರೆಗೆ ಶುಲ್ಕ ನಿಗದಿ ಮಾಡಲು ಪ್ರಸ್ತಾವ ಸರ್ಕಾರದ ಮುಂದಿದೆ.

ಅಂತರ್ಜಲ ಬಳಕೆಗೆ ನಿರಾಕ್ಷೇಪಣಾ ಪತ್ರ ಪಡೆಯುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಕರ್ನಾಟಕ ಅಂತರ್ಜಲ ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನ್ವಯ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯ ಮಾಡಲಾಗಿತ್ತು. ರಾಜ್ಯ ಸರ್ಕಾರ ಆ ನಿಯಮ ರೂಪಿಸಿದಾಗ, ಬಳಕೆ ದರವನ್ನು ನಿಗದಿ ಮಾಡಿರಲಿಲ್ಲ. ಮಾರ್ಗಸೂಚಿ ಉಲ್ಲಂಘಿಸುವವರಿಗೆ ₹10 ಸಾವಿರದವರೆಗೆ ಮಾತ್ರ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಯಂತೆ, ಈಗ ಅದನ್ನು ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ನಗರ ಪ್ರದೇಶದ ಅಪಾರ್ಟ್‌ಮೆಂಟ್‌ಗಳು, ಸಮೂಹ ವಸತಿ ಸಹಕಾರ ಸಂಘಗಳು ಮತ್ತು ಸಾರ್ವಜನಿಕ ನೀರು ಸರಬರಾಜು ಮಾಡುವ ಸರ್ಕಾರದ ಸಂಸ್ಥೆಗಳಿಗೆ ದಿನಕ್ಕೆ ಪ್ರತಿ 25 ಕ್ಯುಬಿಕ್‌ ಮೀಟರ್‌ವರೆಗೆ ₹1, 25–200 ಕ್ಯುಬಿಕ್‌ ಮೀಟರ್‌ ಮತ್ತು 200 ಹಾಗೂ ಮೇಲ್ಪಟ್ಟು ಕ್ಯುಬಿಕ್‌ ಮೀಟರ್‌ಗೆ ₹2 ನಿಗದಿ ಮಾಡಲಾಗಿದೆ. ಸರ್ಕಾರಿ ನೀರು ಪೂರೈಕೆ ಸಂಸ್ಥೆಗಳಿಗೆ ನೀರು ತೆಗೆಯುವ ಶುಲ್ಕ ಪ್ರತಿ ಕ್ಯುಬಿಕ್‌ ಮೀಟರ್‌ಗೆ 50 ಪೈಸೆ ಮತ್ತು ವಾಟರ್‌ ಫ್ಲೋ ಮೀಟರ್‌ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿನ ಕೊಳವೆಬಾವಿಗಳಿಗೆ ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ ಎಲ್ಲ ಸ್ವತಂತ್ರ ಮನೆಗಳು ಹೊಂದಿರುವ ಕೊಳವೆಬಾವಿಗಳಿಗೆ ಟೆಲಿಮೆಟ್ರಿ ಹೊಂದಿರುವ ಡಿಜಿಟಲ್‌ ವಾಟರ್‌ಫ್ಲೋ ಮೀಟರ್‌ ಅಳವಡಿಸಬೇಕು. 20 ಕೆಎಲ್‌ಡಿ (ದಿನಕ್ಕೆ ಕಿಲೋ ಲೀಟರ್‌) ಬಳಸುವವರಿಗೆ ದರ ನಿಗದಿ ಮಾಡಿಲ್ಲ. ಒಂದು ಕಿಲೋ ಲೀಟರ್ ಎಂದರೆ 1000 ಲೀಟರ್.

ಕೈಗಾರಿಕೆಗಳಿಗೂ ಟ್ಯಾಂಕರ್‌ ನೀರು: ಸಾರ್ವಜನಿಕ ನೀರು ಸರಬರಾಜು ಕೊಳವೆಬಾವಿಗಳು, ಕೃಷಿ ಕೊಳವೆಬಾವಿಗಳು ಮತ್ತು ವೈಯಕ್ತಿಕ ಕುಡಿಯುವ  ನೀರಿನ ಕೊಳವೆಬಾವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿರುವ ಘಟಕಗಳಿಗೆ ಕುಡಿಯುವ ಹಾಗೂ ಗೃಹೋಪಯೋಗಿ ಉದ್ದೇಶಕ್ಕಾಗಿ ಬಳಸಲು ಟ್ಯಾಂಕರ್‌ ನೀರು ಪೂರೈಕೆ ಮಾಡಲು ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.