ADVERTISEMENT

ವೈರಾಣು ನಾಶಪಡಿಸುವ ಸಾಧನ: 45 ರೀತಿ ವೈರಸ್‌ ನಾಶ!

ಸಿಎಸ್‌ಐಆರ್‌–ಐಐಟಿಆರ್‌ ಸಾಧನೆಯ ಫಲ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:15 IST
Last Updated 29 ಮಾರ್ಚ್ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ವೈರಸ್‌ ಈಗಾಗಲೇ ಜಗತ್ತಿನಾದ್ಯಂತ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈ ವೈರಸ್‌ ಹರಡುವುದನ್ನು ತಪ್ಪಿಸಲು ಎಲ್ಲ ದೇಶಗಳೂ ಕಠಿಣ ಕ್ರಮ ತೆಗೆದುಕೊಂಡಿವೆ. ಆದರೆ, ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ ಎಷ್ಟರ ಮಟ್ಟಿಗೆ ವೈರಾಣು ಮುಕ್ತ ಎಂಬ ಪ್ರಶ್ನೆ ಉದ್ಭವಿಸಿದೆ.

ದೇಶದ ಸಾವಿರಾರು ಆಸ್ಪತ್ರೆಗಳುಕೊರೊನಾ ಸೇರಿದಂತೆ ವಿವಿಧ ಬಗೆಯ ಸೋಂಕು ರೋಗಗಳಿಂದ ಬಾಧಿತರಾದವರನ್ನು ಚಿಕಿತ್ಸೆಗೊಳಪಡಿಸುತ್ತಿವೆ. ಚಿಕಿತ್ಸೆಗೆ ಬಳಸಿದ ವೈದ್ಯಕೀಯ ಉಪಕರಣಗಳು, ಸಿರಿಂಜ್‌ಗಳು, ಗ್ಲೂಕೋಸ್‌ ದ್ರಾವಣದ ಬಾಟಲಿಗಳು, ಶುಶ್ರೂಶೆ ಸಂದರ್ಭದಲ್ಲಿ ಬಳಸಿದ ಹತ್ತಿ ಮತ್ತಿತರ ವಸ್ತುಗಳನ್ನು ಸಂಪೂರ್ಣ ವೈರಾಣುಗಳಿಂದ ಮುಕ್ತಗೊಳಿಸಿ, ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ವ್ಯಕ್ತವಾಗಿದೆ.

ಜಗತ್ತಿನ ಮುಂದುವರಿದ ದೇಶಗಳಲ್ಲಿ ಮತ್ತು ಭಾರತದ ಶ್ರೀಮಂತ ಆಸ್ಪತ್ರೆಗಳಲ್ಲಿ ವೈರಸ್, ಫಂಗೈ ಮತ್ತು ಇತರ ರೋಗಾಣುಗಳನ್ನು ಕೊಲ್ಲುವ ಸಾಧನಗಳನ್ನು ಹೊಂದಿವೆ. ಎಲ್ಲ ಆಸ್ಪತ್ರೆಗಳು, ಪ್ರಯೋಗಾಲಯಗಳು, ರಕ್ತ ನಿಧಿಗಳು, ಪಶು ವೈದ್ಯ ಆಸ್ಪತ್ರೆಗಳಲ್ಲಿ ಬಯೊ ಮೆಡಿಕಲ್‌ ತ್ಯಾಜ ನಿರ್ವಹಣೆಗೆಂದು ಭಾರತ ಸರ್ಕಾರದ ಅಧೀನದ ‘ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರೀಸರ್ಚ್’(ಸಿಎಸ್‌ಐಆರ್‌) ಮತ್ತು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟಾಕ್ಸಿಕಾಲಜಿ ರೀಸರ್ಚ್‌ (ಐಐಟಿಆರ್‌) ಜಂಟಿಯಾಗಿ ಭಾರತದ ವೈದ್ಯಕೀಯ ವ್ಯವಸ್ಥೆಗೆ ತಕ್ಕಂತೆ ಸಾಧನವನ್ನು ಅಭಿವೃದ್ಧಿಪಡಿಸಿವೆ.

ADVERTISEMENT

ಇದಕ್ಕೆ ‘ಆಪ್ಟಿಮಾಸರ್‌’ (0ptimaser) ಎಂದು ಹೆಸರಿಡಲಾಗಿದೆ. ಮೈಕ್ರೊವೇವ್‌ ಆಧಾರಿತ ಸೋಂಕು ಮುಕ್ತಗೊಳಿಸುವುದೇ ಇದರ ವಿಶೇಷತೆ. 100 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ವೈದ್ಯಕೀಯ ಸಾಧನಗಳಲ್ಲಿರುವ ರೋಗಾಣುಗಳನ್ನು ನಾಶಗೊಳಿಸುತ್ತವೆ ಎಂದು ಸಿಎಸ್‌ಐಆರ್‌ ಮತ್ತು ಐಐಟಿಆರ್‌ ಮೂಲಗಳು ತಿಳಿಸಿವೆ.

ಆಪ್ಟಿಮಾಸರ್‌ ಸುಮಾರು 45 ರೀತಿಯ ವೈರಸ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಅವುಗಳಲ್ಲೂ ಪ್ರಮುಖವಾದವುಗಳೆಂದರೆ ಅಪಾಯಕಾರಿ ವೈರಸ್‌ಗಳಾದ ಎಚ್‌ಐವಿ ಮತ್ತು ಏಡ್ಸ್‌, ಕ್ಷಯ, ನ್ಯೂಮೋನಿಯಾ, ಡೆಂಗಿ, ಕಾಲರಾ, ಹೆಪಟೈಟೀಸ್‌ ಎ,ಬಿ ಮತ್ತು ಸಿ, ಟೈಫಾಯ್ಡ್‌, ರೇಬೀಸ್‌, ಎಬೋಲಾ, ಸಾರ್ಸ್‌, ಇತ್ಯಾದಿಗಳನ್ನು ನಾಶಪಡಿಸುತ್ತವೆ.

ವೈರಸ್‌ ಕೊಲ್ಲುವ ಬಗೆ ಹೇಗೆ?
ಆಪ್ಟಿಮಾಸರ್‌ ನೋಡಲಿಕ್ಕೆ ವಾಷಿಂಗ್‌ ಮೆಷಿನ್‌ ರೀತಿಯಲ್ಲಿ ಇರುತ್ತದೆ. ಐಯೋನೈಸಿಂಗ್‌ ಅಲ್ಲದ ಎಲೆಕ್ಟೋಮ್ಯಾಗ್ನೆಟಿಕ್‌ ತರಂಗಾಂತರಗಳು ಆಪ್ಟಿಮಾಸರ್‌ನೊಳಗೆ ಹಾಕಿದ ಎಲ್ಲ ವಸ್ತುಗಳ ಒಳಗೂ ತೂರಿಕೊಳ್ಳುತ್ತವೆ. ಬೆಳಕು ಹೇಗೆ ತೂರುತ್ತದೆಯೋ ಅದೇ ರೀತಿ. ಮೈಕ್ರೊವೇವ್‌ 100 ಡಿಗ್ರಿಯಷ್ಟು ತಾಪಮಾನದಲ್ಲಿ ವೈದ್ಯಕೀಯ ತ್ಯಾಜ್ಯದಲ್ಲಿನ ಎಲ್ಲ ರೋಗಾಣುಗಳನ್ನು ನಾಶ ಪಡಿಸುತ್ತದೆ.ಹೀಗೆ ನಾಶಪಡಿಸಿದ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದು.

45 ಬಗೆಯ ವೈರೆಸ್‌ಗಳಲ್ಲದೇ ಈಗ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್‌ ಅನ್ನೂ ನಾಶ ಮಾಡಬಹುದು. ವೈದ್ಯರು ಬಳಸುವ ಸಾಧನಗಳಿಗೆ ಅಂಟಿಕೊಂಡಿದ್ದರೆ, ಮೈಕ್ರೊವೇವ್‌ ಮೂಲಕ ನಾಶಪಡಿಸಿ ಹರಡುವುದನ್ನು ತಡೆಯಬಹುದು ಎನ್ನುತ್ತದೆ ಸಿಎಸ್‌ಐಆರ್‌– ಐಐಟಿಆರ್‌ ಮೂಲಗಳು.

ಬಯೋ ಮೆಡಿಕಲ್‌ ವೇಸ್ಟ್‌ಗಳು ಯಾವುವು?

*ಪ್ಲಾಸ್ಟಿಕ್‌,ಗಾಜು, ಹತ್ತಿ, ಸಿರಿಂಜ್‌ಗಳು

*ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ವೇಳೆ ಬಳಸಿ, ಬಿಸಾಡುವ ಉಡುಪುಗಳು

*ಇನ್‌ಫ್ಯೂಷನ್‌ ಕಿಟ್‌ಗಳು

*ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಹೊರ ತೆಗೆದ ದೇಹದ ಭಾಗಗಳು

*ಐಸೋಲೇಷನ್‌ ವಾರ್ಡ್‌ಗಳಲ್ಲಿ ಚಿಕಿತ್ಸೆ ಸಂದರ್ಭದಲ್ಲಿ ಹೊರ ತೆಗೆದ ಅಪಾಯಕಾರಿ ಸೋಂಕು ಭಾಗಗಳು

*ಪ್ರಯೋಗಾಲಯಗಳ ತ್ಯಾಜ್ಯಗಳು

*ಬ್ಲಡ್‌ ಬ್ಯಾಂಕ್‌ಗಳ ತ್ಯಾಜ್ಯಗಳು

*ಯೂರಿನ್‌ ಬ್ಯಾಗ್‌, ಕ್ಯಾಥೆಟರ್ಸ್‌, ಅವಧಿ ಮುಗಿದ ಔಷಧ, ಡೈಪರ್‌ಗಳು ಇತ್ಯಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.