ADVERTISEMENT

ರಾಜೀನಾಮೆ ಮರು ಪರಿಶೀಲನೆಗೆ ಸಿದ್ಧ: ಸ್ಪೀಕರ್‌

17 ಶಾಸಕರ ಅನರ್ಹತೆ ಪ್ರಕರಣ: ಶುಕ್ರವಾರವೇ ವಾದ ಮಂಡನೆ ಕೊನೆಗೊಳ್ಳಲಿ; ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 20:00 IST
Last Updated 24 ಅಕ್ಟೋಬರ್ 2019, 20:00 IST
   

ನವದೆಹಲಿ: ‘ನ್ಯಾಯಾಲಯವು ಅನರ್ಹ ಶಾಸಕರ ರಾಜೀನಾಮೆ ಅರ್ಜಿಗಳ ಮರು ಪರಿಶೀಲನೆಗೆ ಸೂಚಿಸಿದರೆ ಅದನ್ನು ಪಾಲಿಸಲು ತಾನು ಸಿದ್ಧ’ ಎಂದು ವಿಧಾನಸಭೆಯ ಸ್ಪೀಕರ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಅನರ್ಹರ ಅರ್ಜಿ ವಿಚಾರಣೆಯ ವೇಳೆ ಗುರುವಾರ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠದ ಎದುರು ಸ್ಪೀಕರ್‌ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯ ತಿಳಿಸಿದರು.

‘17 ಜನ ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣವನ್ನು ಮರು ಪರಿಶೀಲಿಸುವಂತೆ ಸೂಚಿಸಬಹುದು. ಈ ಬಗ್ಗೆ ಸ್ಪೀಕರ್‌ ಕಚೇರಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿ ಎಂದು ಬಯಸಿದಲ್ಲಿ ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ’ ಎಂದು ವಿವರಿಸಿದರು.

ADVERTISEMENT

ಸತತ ಮೂರು ಗಂಟೆ ಪ್ರಕರಣದ ವಿಚಾರಣೆ ನಡೆಸಿ ಅನರ್ಹರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ವಾದ–ಪ್ರತಿವಾದವು ಶುಕ್ರವಾರ ಕೊನೆಗೊಳ್ಳಬೇಕು ಎಂದು ಸೂಚಿಸಿತು.

ಕಾಂಗ್ರೆಸ್ ಪರ ವಕೀಲ ಕಪಿಲ್‌ ಸಿಬಲ್‌ ಶುಕ್ರವಾರ ವಾದ ಮಂಡಿಸಲಿದ್ದಾರೆ. ಅನರ್ಹರ ಪರ ವಕೀಲರು ಬಯಸಿದಲ್ಲಿ ಪ್ರತಿವಾದಕ್ಕೆ ಅವಕಾಶ ನೀಡಲಾಗುವುದು.

***

*ನಾನು ಎಲ್ಲರಿಗಿಂತ ಮೊದಲು, ಜುಲೈ 1ರಂದೇ ರಾಜೀನಾಮೆ ನೀಡಿದ್ದೆ. ಸಾವಿರಾರು ಎಕರೆ ಜಮೀನನ್ನು ಖಾಸಗಿ ಕಂಪನಿಗೆ ನೀಡುವ ಸರ್ಕಾರದ ತೀರ್ಮಾನ ವಿರೋಧಿಸಿ ನಿಯಮಾನುಸಾರ ರಾಜೀನಾಮೆ ಸಲ್ಲಸಿದ್ದೇನೆ. ನನ್ನ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಆಗಿನ ಸ್ಪೀಕರ್‌ಗೆ ನ್ಯಾಯಪೀಠ ಸೂಚಿಸಿತ್ತು. ಅನರ್ಹತೆಗೆ ಮೊದಲು ಈ ಆದೇಶದ ಬಗ್ಗೆ ಸ್ಪೀಕರ್‌ ಸ್ಪಷ್ಟನೆ ಕೇಳಬಹುದಿತ್ತು.

– ಸಜನ್‌ ಪೂವಯ್ಯ–ಆನಂದ್‌ಸಿಂಗ್‌ ಪರ ವಕೀಲ

*ರಾಜೀನಾಮೆ ನೀಡದಿದ್ದರೂ ನನ್ನ ವಿರುದ್ಧ ಅನರ್ಹತೆಯ ದೂರು ನೀಡಲಾಗಿದೆ. ವಿಚಾರಣೆಗಾಗಿ ನೀಡಿದ್ದ ನೋಟಿಸ್‌, ಮೂರು ದಿನಗಳ ನಂತರ ನನ್ನ ಕೈಸೇರಿತು. ಪಕ್ಷ ವಿರೋಧಿ ಚಟುವಟಿಕೆ ನಡೆಸದಿದ್ದರೂ ಪಕ್ಷವು ಅನರ್ಹತೆ ದೂರು ನೀಡಿದೆ.

*ನನಗೂ ಪಕ್ಷಾಂತರಕ್ಕೂ ಸಂಬಂಧವಿಲ್ಲ. ಮುಂಚಿನಿಂದಲೇ ನಾನು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಕೆಲವು ಶಾಸಕರು ಮುಂಬೈನಲ್ಲಿ ತಂಗಿದ್ದಕ್ಕೂ ನನಗೂ ಸಂಬಂಧವಿಲ್ಲದಿದ್ದರೂ ಅನರ್ಹಗೊಳಿಸಲಾಗಿದೆ.

*ಅನಾರೋಗ್ಯದಿಂದಾಗಿ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿಲ್ಲ. ಸ್ಪೀಕರ್‌ಗೆ ತಿಳಿಸಿ ಚಿಕಿತ್ಸೆಗೆ ತೆರಳಿದ್ದರೂ ವೈದ್ಯಕೀಯ ನೆಲೆಯಲ್ಲಿ ಅಧಿವೇಶನದಿಂದ ನನಗೆ ವಿನಾಯಿತಿ ನೀಡಲಿಲ್ಲ. ನನ್ನ ವಿರುದ್ಧ ವಿಪ್ ಉಲ್ಲಂಘನೆಯ ಆರೋಪ ಹೊರಿಸಲಾಗಿದೆ.

*ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನ ಪ್ರಕ್ರಿಯೆ ಅಪೂರ್ಣವಾಗಿದೆ. ಪಕ್ಷಕ್ಕೆ ಸಂಬಂಧವೇ ಇಲ್ಲದಿದ್ದರೂ ನನ್ನನ್ನು ಅನರ್ಹಗೊಳಿಸಿ ಸ್ಪೀಕರ್ ತಪ್ಪು ಮಾಡಿದ್ದಾರೆ.

– ವಿ.ಗಿರಿ– ಶ್ರೀಮಂತ ಪಾಟೀಲ, ಆರ್. ಶಂಕರ್ ಪರ ವಕೀಲ

*ಸ್ಪೀಕರ್ ನಿರ್ಧಾರ ಸೂಕ್ತ. ಅನರ್ಹಗೊಳಿಸಿ ಆದೇಶ ಹೊರಡಿಸುವುದು ಶಾಸಕರ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ. ಸ್ಪೀಕರ್ ಆದೇಶ ಪ್ರಶ್ನಿಸಲಾದ ಅರ್ಜಿಗಳನ್ನು ವಜಾಗೊಳಿಸಿ.

*ರಾಜೀನಾಮೆ ಮೂಲಭೂತ ಹಕ್ಕು ಎಂದು ಹೇಳಲು ಶಾಸಕರು ಸರ್ಕಾರಿ ನೌಕರರಲ್ಲ. ಅವರು ಜನರಿಂದ ಆಯ್ಕೆಯಾದವರು. ರಾಜೀನಾಮೆ ಹಿಂದಿನ ಕಾರಣವನ್ನು ಸ್ಪೀಕರ್ ಗಮನಿಸಬೇಕು. ರಾಜೀನಾಮೆ ನೈಜವೇ ಎಂಬುದನ್ನು ಪರಿಶೀಲಿಸುವ ಅಧಿಕಾರ ಸ್ಪೀಕರ್‌ಗಿದೆ.

*ರಾಜೀನಾಮೆ ಪತ್ರದಲ್ಲಿನ ಸಹಿ ನಕಲಿಯೇ, ಅಸಲಿಯೇ ಎಂಬುದನ್ನಷ್ಟೆ ಪರಿಶೀಲಿಸುವುದು ಸ್ಪೀಕರ್‌ ಕೆಲಸವಲ್ಲ. ಒತ್ತಡ, ಆಸೆ, ಆಮಿಷಗಳು ಕಾರಣವೇ ಎಂಬುದನ್ನು ಗಮನಿಸಬೇಕು. ಈ ಬಗ್ಗೆ ವಿಚಾರಣೆ ನಡೆಸುವುದು ಅವರ ಹೊಣೆ.

*ರಾಜೀನಾಮೆ ಹಾಗೂ ಅನರ್ಹತೆಗೆ ಸಂಬಂಧವಿದೆ. ಎರಡರಲ್ಲಿ ಯಾವುದಾದರೂ ಒಂದು ನಿರ್ಧಾರ ಕೈಗೊಳ್ಳುವ ಅಧಿಕಾರ ಸ್ಪೀಕರ್‌ಗಿದೆ.

*ಸ್ಪೀಕರ್‌ಗೆ ಸಾಂವಿಧಾನಿಕ ಜವಾಬ್ದಾರಿ ಇದೆ. ರಾಜೀನಾಮೆ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲರು ಸಲಹೆ ನೀಡುವಂತಿಲ್ಲ.

*ಅನರ್ಹಗೊಳಿಸುವ 7 ದಿನ ಮೊದಲು ನೋಟಿಸ್‌ ನೀಡುವುದೂ ಕಡ್ಡಾಯವಲ್ಲ. 2 ದಿನ ಮೊದಲು ನೋಟಿಸ್‌ ನೀಡಿ ಅನರ್ಹಗೊಳಿಸಿದ ಉದಾಹರಣೆಗಳಿವೆ.

*ಅನರ್ಹರಿಗೆ ಆಯಾ ಕ್ಷೇತ್ರಗಳ ಟಿಕೆಟ್‌ ನೀಡುವ ಉದ್ದೇಶದಿಂದಲೇ ಬಿಜೆಪಿಯ ಆಕಾಂಕ್ಷಿಗಳನ್ನು ಸರ್ಕಾರ ನಿಗಮ– ಮಂಡಳಿಗೆ ನೇಮಕ ಮಾಡಿದೆ.

ರಾಜೀವ್ ಧವನ್–ಜೆಡಿಎಸ್ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.