ADVERTISEMENT

ಮಡಿಕೇರಿ: ಜಿಲ್ಲಾ ಆಸ್ಪತ್ರೆಗೆ ಮೇಲ್ದರ್ಜೆ ಭಾಗ್ಯ

‘ಮೈತ್ರಿ’ ಸರ್ಕಾರದ ಅವಧಿಯ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಯೋಜನೆ, 750 ಬೆಡ್‌ ಸೌಲಭ್ಯ

ಅದಿತ್ಯ ಕೆ.ಎ.
Published 10 ಜನವರಿ 2020, 19:45 IST
Last Updated 10 ಜನವರಿ 2020, 19:45 IST
ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನೀಲ ನಕಾಶೆ
ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನೀಲ ನಕಾಶೆ   

ಮಡಿಕೇರಿ: ಬಹಳಷ್ಟು ವರ್ಷದ ಕೂಗಿನ ನಂತರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಆಸ್ಪತ್ರೆಯು ಮೇಲ್ದರ್ಜೆಗೇರುತ್ತಿದೆ.

‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿ 450 ಬೆಡ್‌ ಸೌಲಭ್ಯ ಕಲ್ಪಿಸಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವ ಘೋಷಣೆ ಮಾಡಿದ್ದರು. ಅದನ್ನು ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ.

ಈಗಾಗಲೇ 300 ಹಾಸಿಗೆ ಸೌಲಭ್ಯವುಳ್ಳ ಬೋಧಕ ಆಸ್ಪತ್ರೆಯಲ್ಲಿ ನೂತನ ಕಟ್ಟಡ ತಲೆಯೆತ್ತಲಿದೆ. ಕಟ್ಟಡದ ನೀಲ ನಕಾಶೆ ಸಿದ್ಧವಾಗಿದೆ. ಕಳೆದ ವಾರವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ಶೀಘ್ರವೇ ಮಡಿಕೇರಿಗೆ ಬಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ADVERTISEMENT

ಎಲ್ಲಿ ನಿರ್ಮಾಣವಾಗಲಿದೆ?

ಈಗಿರುವ ಮಡಿಕೇರಿ – ಮೈಸೂರು ರಸ್ತೆಯ ಆಸ್ಪತ್ರೆ ಆವರಣದಲ್ಲೇ ₹ 100 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಮೆಡಿಕಲ್ ಕಾಲೇಜು ಸ್ಥಾಪನೆಯಾದ ಮೇಲೆ, ಬೋಧಕ ಆಸ್ಪತ್ರೆಯಾಗಿಯೂ ಬದಲಾಗಿತ್ತು. ಮೆಡಿಕಲ್‌ ಕಾಲೇಜಿನಲ್ಲಿ 600 ಮಂದಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಪ್ಯಾರ ಮೆಡಿಕಲ್‌ ಸಹ ಆರಂಭವಾಗಿದೆ. ನರ್ಸಿಂಗ್‌ ಶಿಕ್ಷಣ ಸಹ ಶೀಘ್ರವೇ ಆರಂಭಗೊಳ್ಳಲಿದೆ. ಬೋಧಕ ಆಸ್ಪತ್ರೆಯನ್ನು ಹೈಟೆಕ್‌ ಮಾಡಬೇಕು ಎಂದು ಜಿಲ್ಲೆಯ ಜನರು ಮಾತ್ರವಲ್ಲದೇ ವೈದ್ಯರೂ ಸಹ ಕೋರಿದ್ದರು. ಅದಕ್ಕೆ ಯೋಗ ಕೂಡಿ ಬರುವ ಲಕ್ಷಣ ಕಾಣಿಸುತ್ತಿದೆ. ಮಡಿಕೇರಿಯಲ್ಲಿ ಜಾಗದ ಸಮಸ್ಯೆಯಿದೆ. ಈಗಿರುವ ಆಸ್ಪತ್ರೆ ಆವರಣದಲ್ಲಿಯೇ ಹಳೆಯ ಕಟ್ಟಡ ಹಾಗೂ ವಸತಿ ನಿಲಯಗಳನ್ನು ತೆರವು ಮಾಡಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ.

ಅಭಿಯಾನ ನಡೆದಿತ್ತು!

ಕೊಡಗು ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ಸೌಲಭ್ಯ ಇಲ್ಲ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಜಿಲ್ಲೆಯ ಜನರು ಸ್ವಲ್ಪಮಟ್ಟಿಗೆ ನಿರಾಳರಾಗಲಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ‘ಮಲ್ಟಿ ಸೂಪರ್‌ ಸ್ಪೆಷಾಲಿಟಿ’ ಆಸ್ಪತ್ರೆಗೆ ಆಗ್ರಹಿಸಿ ಅಭಿಯಾನ ನಡೆದಿತ್ತು. ಚಿತ್ರರಂಗದ ನಟರು ಈ ಅಭಿಯಾನ ಬೆಂಬಲಿಸಿ ಟ್ವೀಟ್‌ ಮಾಡಿದ್ದರು. ನಟ ಶಿವರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌, ಕೊಡಗಿನ ಭುವನ್‌, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ಅಭಿಯಾನ ಬೆಂಬಲಿಸಿದ್ದರು. ನಾಡಿಗೆ ನೀರು ನೀಡುವ ಕೊಡಗಿನ ಜನರ ಆರೋಗ್ಯ ಕಾಪಾಡಬೇಕು. ಮಡಿಕೇರಿಯ ಸೂಕ್ತ ಸ್ಥಳದಲ್ಲಿ ‘ಮಲ್ಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಿಸಬೇಕು ಎಂದು ಆಗ್ರಹಿಸಿದ್ದರು. ಜಿಲ್ಲೆಯಲ್ಲೂ ಸಾಕಷ್ಟು ಸಂಘ– ಸಂಸ್ಥೆಗಳೂ ಮನವಿ ಸಲ್ಲಿಸಿದ್ದವು. ಆದರೆ, ಸದ್ಯಕ್ಕೆ ಇದೀಗ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ.

ಮೈಸೂರು – ಮಂಗಳೂರು ಅನಿವಾರ್ಯ

ಕೊಡಗು ಜಿಲ್ಲೆಯ ಜನರು ಅನಾರೋಗ್ಯ ಪೀಡಿತರಾದರೆ ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ಲಭ್ಯ. ಅಪಘಾತ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಗಂಭೀರ ಪ್ರಕರಣಕ್ಕೆ ಇಲ್ಲಿ ಚಿಕಿತ್ಸೆಯೇ ಸಿಗುವುದು ಕಷ್ಟ. ಇದರಿಂದ ಜಿಲ್ಲೆಯ ಜನರು ಅನಿವಾರ್ಯವಾಗಿ ಮೈಸೂರು ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದರು. ಹಲವು ಅಪಘಾತ ಪ್ರಕರಣದಲ್ಲಿ ಇಲ್ಲಿ ಚಿಕಿತ್ಸೆ ಸಿಗದೇ ಗಾಯಾಳುಗಳನ್ನು ದೂರದ ನಗರಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ಅಸುನೀಗಿದ ಪ್ರಕರಣಗಳೂ ಕಣ್ಣೆದುರಿಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.