ADVERTISEMENT

ಗಣಿಬಾಧಿತ ಜಿಲ್ಲೆಗಳಿಗಿಲ್ಲ ಅಭಿವೃದ್ಧಿ ಭಾಗ್ಯ!

ಸಂಗ್ರಹವಾದ ಡಿಎಂಎಫ್‌ ನಿಧಿ ₹ 1,652 ಕೋಟಿ; ಖರ್ಚಾಗಿದ್ದು ₹ 157 ಕೋಟಿ

ಹೊನಕೆರೆ ನಂಜುಂಡೇಗೌಡ
Published 8 ಅಕ್ಟೋಬರ್ 2019, 19:46 IST
Last Updated 8 ಅಕ್ಟೋಬರ್ 2019, 19:46 IST
   

ಬೆಂಗಳೂರು: ರಾಜ್ಯದ ಗಣಿಬಾಧಿತ ಜಿಲ್ಲೆಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಜಿಲ್ಲಾ ಖನಿಜ ನಿಧಿಯಡಿ (ಡಿಎಂಎಫ್‌) ಸಂಗ್ರಹವಾಗಿರುವ ಹಣ ಮೂರೂವರೆ ವರ್ಷಗಳಿಂದ ಖರ್ಚಾಗದೆ ಕೊಳೆಯುತ್ತಿದೆ.

ಅಕ್ರಮ ಗಣಿಗಾರಿಕೆಯಿಂದ ಭಾರಿ ಹಾನಿಗೊಳಗಾಗಿರುವ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಪುನರ್‌ನಿರ್ಮಾಣ ಹಾಗೂ ಪುನರ್‌ವಸತಿ ಯೋಜನೆಗಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ಆರಂಭಿಸಿದ ವಿಶೇಷ ಉದ್ದೇಶದ ಯೋಜನೆಯಡಿ (ಎಸ್‌ಪಿವಿ) ಸಂಗ್ರಹವಾಗಿರುವ ₹ 16 ಸಾವಿರ ಕೋಟಿಗೆ ಒದಗಿರುವ ಸ್ಥಿತಿ ಈಗ ಡಿಎಂಎಫ್‌ ನಿಧಿಗೂ ಎದುರಾಗಿದೆ.

ಡಿಎಂಎಫ್‌ ಯೋಜನೆಯಡಿ ದೇಶದಲ್ಲಿ ಇದುವರೆಗೆ ₹ 31,000 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ರಾಜ್ಯದ ಪಾಲು ₹ 1,652 ಕೋಟಿ. ಆದರೆ, ಇದರಲ್ಲಿ ಇದುವರೆಗೆ ಖರ್ಚಾಗಿರುವುದು ₹ 157 ಕೋಟಿ ಮಾತ್ರ!

ADVERTISEMENT

ಎಂಎಂಡಿಆರ್‌ (ತಿದ್ದುಪಡಿ) ಕಾಯ್ದೆಯಡಿ ಸ್ಥಾಪಿತವಾಗಿರುವ ಡಿಎಂಎಫ್‌, ರಾಜ್ಯದಲ್ಲಿ ಜಾರಿಯಾಗಿದ್ದು 2016ರಲ್ಲಿ. ಎಸ್‌ಪಿವಿ ಯೋಜನೆಯಿಂದ ಪ್ರೇರಣೆ ಪಡೆದು ಕೇಂದ್ರ 2015ರಲ್ಲಿ ಎಂಎಂಡಿಆರ್‌ ಕಾಯ್ದೆಗೆ ತಿದ್ದುಪಡಿ ತಂದು ಡಿಎಂಎಫ್‌ ಯೋಜನೆ ಜಾರಿಗೊಳಿಸಿದೆ.

ಡಿಎಂಎಫ್‌ ನಿಧಿ ಬಳಕೆ ಹಾಗೂ ಯೋಜನೆಗಳ ಜಾರಿ ಕುರಿತು ತೀರ್ಮಾನಿಸಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ಇದೆ. ಕನಿಷ್ಠ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಯಬೇಕು. ಆದರೆ, ಯೋಜನೆ ಆರಂಭವಾದಾಗಿನಿಂದ ಇಲ್ಲಿವರೆಗೂ ಸಭೆಯೇ ನಡೆದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

‘ರಾಜಕೀಯ ಅಸ್ಥಿರತೆ ಹಾಗೂ ಪದೇ ಪದೇ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಿಂದಾಗಿ ಕಾಲಕಾಲಕ್ಕೆ ಸಮಿತಿ ಸಭೆಗಳು ನಡೆಯುತ್ತಿಲ್ಲ. ಇದರಿಂದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ’ ಎಂದು ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ಮೂಲಗಳು ತಿಳಿಸಿವೆ.

ಗಣಿಗಾರಿಕೆ ಗುತ್ತಿಗೆ ಪಡೆದ ಕಂಪನಿಗಳು ರಾಜಧನದ ಶೇ 30ರಷ್ಟನ್ನು ಡಿಎಂಎಫ್‌ ನಿಧಿಗೆ ಪಾವತಿಸುತ್ತಿವೆ. ಇದರಡಿ ಸರ್ಕಾರ ಕುಡಿಯುವ ನೀರು, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಆರೋಗ್ಯ, ಶಿಕ್ಷಣ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ, ಕೌಶಲ ಅಭಿವೃದ್ಧಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

ಕರ್ನಾಟಕಕ್ಕೆ ಹೋಲಿಸಿದರೆ ಒಡಿಶಾ, ಛತ್ತೀಸಗಡ, ಜಾರ್ಖಂಡ್‌ ಮತ್ತು ರಾಜಸ್ಥಾನವು ಜಿಲ್ಲಾ ಖನಿಜ ನಿಧಿ ಬಳಕೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿವೆ. ಒಡಿಶಾ ಸರ್ಕಾರ ಡಿಎಂಎಫ್‌ ಯೋಜನೆಗಳ ಬಗ್ಗೆ ಚರ್ಚಿಸಿ, ಜಾರಿಗೊಳಿಸಲು ‘ಅರ್ನೆಸ್ಟ್‌ ಅಂಡ್‌ ಯಂಗ್‌’ ಎಂಬ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.

ರಾಜ್ಯದಲ್ಲಿ ಖರ್ಚಾಗದೆ ಉಳಿದಿರುವ ₹ 1500 ಕೋಟಿ ಡಿಎಂಎಫ್‌ ಹಣ ಬಳಸಿಕೊಂಡು ಅಭಿವೃದ್ಧಿ ಹೊಂದುವ ಭಾಗ್ಯ ಜಿಲ್ಲೆಗಳಿಗೆ ಇನ್ನೂ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.