ADVERTISEMENT

‘ಭ್ರಷ್ಟಾಚಾರದ ಪಿತಾಮಹ’ ಎಂದ ವಿಜಯೇಂದ್ರಗೆ ಸಾಬೀತು ಮಾಡಲು ಡಿಕೆಶಿ ಸವಾಲು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:28 IST
Last Updated 19 ಡಿಸೆಂಬರ್ 2025, 15:28 IST
   

ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಾತಿನ ಕದನ ಶುಕ್ರವಾರವೂ ಮುಂದುವರಿಯಿತು. ಸುವರ್ಣ ವಿಧಾನಸೌಧದ ಹೊರಗೆ ಇಬ್ಬರೂ ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿದರು.

‘ವಿಜಯೇಂದ್ರ ಕಲೆಕ್ಷನ್‌ ಕಿಂಗ್‌’ ಎಂಬ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ, ಗರಂ ಆಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಡಿ.ಕೆ.ಶಿವಕುಮಾರ್‌ ಭ್ರಷ್ಟಾಚಾರದ ಪಿತಾಮಹ. ಈ ಮಾತನ್ನು ನಾನು ಮಾತ್ರ ಅಲ್ಲ; ಕಾಂಗ್ರೆಸ್‌ನವರೂ ಹೇಳುತ್ತಾರೆ. ಅವರ ಬಾಯಿಯಿಂದ ಭ್ರಷ್ಟಾಚಾರದ ಬಗ್ಗೆ ಮಾತು ಬಾರದಿದ್ದರೆ ಉತ್ತಮ’ ಎಂದರು.

‘ಶಿವಕುಮಾರ್‌ ಅಧಿಕಾರದ ಮದದಲ್ಲಿ ಮಾತನಾಡುತ್ತಿದ್ದೀರಿ. ನಾನೂ ಒಬ್ಬ ಜನಪ್ರತಿನಿಧಿ ಇದ್ದೇನೆ. ಯಾರಿಗೋ ಬೆದರಿಕೆ ಹಾಕಿದ ಹಾಗೆ, ದಬ್ಬಾಳಿಕೆ ಮಾಡಿದ ಹಾಗೆ ನನ್ನೊಂದಿಗೆ ವರ್ತಿಸಬೇಡಿ’ ಎಂದೂ ತಾಕೀತು ಮಾಡಿದರು.

ADVERTISEMENT

‘ಬೆಂಗಳೂರು ನಗರವೂ ಸೇರಿ ಇಡೀ ರಾಜ್ಯದಲ್ಲಿ ಒಂದು ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಇವರ ಸರ್ಕಾರಕ್ಕೆ ಇಲ್ಲ. ಇಂಥವರು ನಮಗೆ ಮಾತನಾಡುತ್ತಾರೆ. ಸರ್ಕಾರ ಬಂದಾಗಿನಿಂದ ಖಜಾನೆ ಖಾಲಿ ಮಾಡಿ ಹೈಕಮಾಂಡ್‌ ತೃಪ್ತಿ‍ಪಡಿಸುತ್ತಿರುವುದು ನಡೆದೇ ಇದೆ. ಯಾವಾಗ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆಯೋ ಅವಾಗೆಲ್ಲ ಎಟಿಎಂ ಆಗಿ ಕೆಲಸ ಮಾಡಿದ್ದಾರೆ. ಖಜಾನೆ ಖಾಲಿ ಆಗಿದೆ ಎಂದರೆ ನಿಮಗೆ ಸಿಟ್ಟು ಬರುತ್ತದೆಯೇ? ಏಕೆ?’ ಎಂದೂ ಪ್ರಶ್ನಿಸಿದರು.

ಇದಕ್ಕೆ ಅಷ್ಟೇ ಕುಪಿತರಾಗಿ ‍ಪ್ರತ್ಯುತ್ತರ ನೀಡಿದ ಶಿವಕುಮಾರ್‌, ‘ನಮ್ಮ ಸರ್ಕಾರ ಹೈಕಮಾಂಡಿನ ಎಟಿಎಂ ಎಂಬುದನ್ನು ಸಾಬೀತುಪಡಿಸಬೇಕು. ಯಾವ ಲೆಕ್ಕದಲ್ಲಿ ಈ ರೀತಿ ಆರೋಪ ಮಾಡಿದ್ದಾರೆ ಎಂದು ಕೇಳಿಯೇ ಕೇಳುತ್ತೇನೆ. ಈ ವಿಜಯೇಂದ್ರಗೆ ಮುಂದೆಯೂ ‘ಸರಿಯಾದ ಉತ್ತರ’ ಕೊಡುತ್ತೇನೆ’ ಎಂದರು.

‘ಚಳಿಗಾಲದ ಅಧಿವೇಶನ ಯಶಸ್ವಿಯಾಗಿದೆ. ನಮ್ಮ ಮೇಲೆ ಆರೋಪ ಮಾಡಲು ಬಿಜೆಪಿಯವರಿಗೆ ಬೇರೇನೂ ಸಿಗುತ್ತಿಲ್ಲ. ಇಂಥ ವಿಚಾರ ಹೊರ ತರುತ್ತಿದ್ದಾರೆ’ ಎಂದೂ ಹೇಳಿದರು.

‘ಪ್ರಕರಣವೊಂದರಲ್ಲಿ ತನಿಖೆಗಾಗಿ ದೆಹಲಿ ಪೊಲೀಸರು ಕರೆದಿದ್ದಾರೆ. ಅಧಿವೇಶನದಲ್ಲಿ ಕ್ರಿಯಾಶೀಲನಾದ ಕಾರಣ ಹೋಗಲು ಆಗಿಲ್ಲ. ಮುಂದಿನ ವಾರ ಬರುವುದಾಗಿ ಉತ್ತರಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.