ಮಡಿಕೇರಿ/ಶಿವಮೊಗ್ಗ: ರಾಜ್ಯದ ಕೆಲವೆಡೆ ಬುಧವಾರವೂ ಮಳೆಯ ಅಬ್ಬರ ಮುಂದುವರಿದಿದೆ. ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಜೋರು ಗಾಳಿ ನಿಯಂತ್ರಣಕ್ಕೆ ಬಂದಿಲ್ಲ. ಹವಾಮಾನ ಇಲಾಖೆ ಜುಲೈ 19ರವರೆಗೂ ರೆಡ್ ಅಲರ್ಟ್ ನೀಡಿದೆ. ಭಾರಿ ಮಳೆಯ ಮುನ್ನಚ್ಚರಿಕೆಯಿಂದ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ತರಗತಿಗಳಿಗೆ ಜುಲೈ 18ರಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ರಜೆ ಘೋಷಿಸಿದ್ದಾರೆ.
ಜಿಲ್ಲೆಯ ಕಾವೇರಿ, ಕನ್ನಿಕೆ, ಹಾರಂಗಿ, ಪಯಸ್ವಿನಿ, ಲಕ್ಷ್ಮಣತೀರ್ಥ ಸೇರಿದಂತೆ ಎಲ್ಲ ನದಿಗಳು, ತೊರೆಗಳು ಅಪಾಯದಂಚಿನಲ್ಲಿ ಹರಿಯುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಡಿಕೇರಿ– ಮಂಗಳೂರು ರಸ್ತೆಯ ಜೋಡುಪಾಲದ ಸಮೀಪದ ರಸ್ತೆಗೆ ಮಣ್ಣು ಕುಸಿದಿದೆ.
ಹಾರಂಗಿ ಜಲಾಶಯದ ಒಳ ಹರಿವು 10,618 ಕ್ಯುಸೆಕ್‌ಗೆ ಏರಿಕೆಯಾಗಿದೆ. ಸದ್ಯ, ನದಿಗೆ 10 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ 9.30ರವರೆಗೂ ಒಂದೇ ಸಮನೆ ಮಳೆ ಸುರಿದು, ನಾಪೋಕ್ಲು -ಮೂರ್ನಾಡು ರಸ್ತೆ, ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಿಳಿಗೇರಿ– ಕಗ್ಗೋಡು ಮಾರ್ಗವಾಗಿ ಬಯಗೊಂಡ ಮನೆ ಬಳಿ ಇರುವ ಸೇತುವೆಯ ಒಂದು ಬದಿ ಮಣ್ಣು ಕುಸಿದಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಭಾಗಮಂಡಲ– ನಾಪೋಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಪೊನ್ನಂಪೇಟೆ ತಾಲ್ಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಹಾಗೂ ವಿರಾಜಪೇಟೆ- ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಮಳೆ ಗಾಳಿಯಿಂದ ಮರಗಳು ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಮರಗಳನ್ನು ತೆರವುಗೊಳಿಸಿದ ಬಳಿಕ ಸಂಚಾರ ಎಂದಿನಂತಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 23 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ.
ಮಲೆನಾಡಿನಲ್ಲಿ ಮಳೆ ಮುಂದುವರಿದಿದೆ. ಆದರೆ, ಸೋಮವಾರ ಮತ್ತು ಮಂಗಳವಾರದಷ್ಟು ಅಬ್ಬರ ಬುಧವಾರ ಕಂಡುಬರಲಿಲ್ಲ. ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಸ್ವಲ್ಪ ಕಡಿಮೆಯಾಗಿದೆ. ತುಂಗಾ ಹಾಗೂ ಭದ್ರಾ ಜಲಾಶಯಗಳಲ್ಲಿ ಒಳಹರಿವು ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಮಳೆಯ ಪ್ರಮಾಣ ಕಡಿಮೆ ಆಗಿದೆ.
ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಇಡೀ ಬಿಟ್ಟು ಬಿಟ್ಟು ಮಳೆ ಸುರಿದಿತ್ತು. ಬುಧವಾರ ಬೆಳಿಗ್ಗೆ ತುಂತುರು ಮಳೆ ನಂತರ ಬಿಟ್ಟು ಬಿಟ್ಟು ಧಾರಾಕಾರ ಮಳೆ ಸುರಿಯಿತು.
ಉಡುಪಿ ಜಿಲ್ಲೆಯಲ್ಲೂ ಬುಧವಾರ ಹಗಲಿಡೀ ಬಿರುಸಿನ ಮಳೆ ಸುರಿದಿದೆ. ಇದರಿಂದಾಗಿ ಕೆಲವೆಡೆ ಪ್ರವಾಹದ ನೀರು ಪೂರ್ಣ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಬ್ರಹ್ಮಾವರ ಮಡಿಸಾಲು ಹೊಳೆಯಲ್ಲಿ ಬುಧವಾರ ಬೆಳಿಗ್ಗೆ ಇಳಿಮುಖ ಕಂಡಿದ್ದ ನೆರೆ ಸಂಜೆ ಮತ್ತೆ ಏರಿಕೆ ಕಂಡಿದೆ. ನದಿ ತೀರದ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೈಂದೂರು ಪಡುವರಿ ಗ್ರಾಮದ ಸೋಮೇಶ್ವರ ಬಳಿ ಬುಧವಾರ ಗುಡ್ಡ ಕುಸಿತ ಉಂಟಾಗಿದೆ. ಕರಾವಳಿಯ ಇನ್ನೂ ಐದು ದಿನ ಗುಡುಗಿನಿಂದ ಕೂಡಿದ ಗಾಳಿ ಮಳೆ ಸುರಿಯಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೇ 18 ಮತ್ತು 19ರಂದು ರೆಡ್ ಅಲರ್ಟ್ ಹಾಗೂ 20, 21,22 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದು, ಶೃಂಗೇರಿ ಪಟ್ಟಣದಲ್ಲಿ ಪ್ರವಾಹ ತಗ್ಗಿದೆ. ಬುಧವಾರ ಬೆಳಿಗ್ಗೆ ತನಕ ಬಿರುಸಿನಿಂದ ಮಳೆ ಸುರಿಯಿತು. ಬಳಿಕ ಮಳೆ ಕಡಿಮೆಯಾಗಿದ್ದು, ನದಿಗಳ ರಭಸ ಕೂಡ ಇಳಿಕೆಯಾಗಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕೊಪ್ಪ ಭಾಗದಲ್ಲಿ ಮಳೆ ಮುಂದುವರಿದಿದೆ.
ಹಾವೇರಿಯಲ್ಲಿನ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಾವೇರಿ ತಾಲ್ಲೂಕಿನ ಕೋಳೂರು ಮತ್ತು ಸವಣೂರು ತಾಲ್ಲೂಕಿನ ಕಳಸೂರು ನಡುವೆ ಸಂಪರ್ಕ ಕಲ್ಪಿಸುವ ಬ್ಯಾರೇಜ್ ಮುಳುಗಡೆಯಾಗಿದೆ. ಜನರ ಓಡಾಟ ಬಂದ್ ಆಗಿದೆ.
ಹೊಸಪೇಟೆ (ವಿಜಯನಗರ) ವರದಿ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಬುಧವಾರ 50 ಸಾವಿರ ಕ್ಯುಸೆಕ್ ದಾಖಲಾಗಿದೆ.
ಕಳೆದ 24 ಗಂಟೆಗಳಲ್ಲಿ ಒಂದು ಹಂತದಲ್ಲಿ ಜಲಾಶಯಕ್ಕೆ 63.320 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಸರಾಸರಿ ಒಳಹರಿವಿನ ಪ್ರಮಾಣ 49,522 ಕ್ಯುಸೆಕ್ ಇದೆ. 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ ನೀರಿನ ಮಟ್ಟ 1,611.07 ಇದೆ. 105.78 ಟಿಎಂಸಿ ಅಡಿ ಸಂಗ್ರಹವಾಗಿದೆ.
ಹೆದ್ದಾರಿಯಲ್ಲಿ ಕುಸಿದ ಮಣ್ಣು: ಕೆಲಕಾಲ ಸಂಚಾರ ಸ್ಥಗಿತ
ಸಕಲೇಶಪುರ (ಹಾಸನ ಜಿಲ್ಲೆ): ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬುಧವಾರ ಮಧ್ಯಾಹ್ನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿರುವಾಗಲೇ ಸುಮಾರು 100 ಅಡಿ ಎತ್ತರದಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಎರಡು ಕಾರುಗಳು ಅಪಾಯದಿಂದ ಪಾರಾಗಿವೆ. ಮಳೆ ನೀರಿನೊಂದಿಗೆ ಕುಸಿದ ಮಣ್ಣು ಟ್ಯಾಂಕರ್ ಲಾರಿಯೊಂದಕ್ಕೆ ಅಪ್ಪಳಿಸಿತು. ಕೇವಲ ಮೂರು ಅಡಿ ದೂರದಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿದ್ದರೆ ಕಾರುಗಳು ಬಲಭಾಗದ ಪ್ರಪಾತಕ್ಕೆ ಬಿದ್ದು ಹೆಚ್ಚಿನ ಹಾನಿ ಸಂಭವಿಸುತ್ತಿತ್ತು. ಕೂಡಲೇ ಸ್ಥಳದಲ್ಲಿದ್ದ ಕಪ‍್ಪಳ್ಳಿ ನಿವಾಸಿಗಳಾದ ವಿಜಯಶಂಕರ್ ಹಾಗೂ ಜಯಶಂಕರ್ ಸಹೋದರರು ತುರ್ತಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. 2 ಗಂಟೆಗೂ ಹೆಚ್ಚು ಕಾಲ ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಡಾ. ಎಂ.ಕೆ. ಶ್ರುತಿ ತಹಶೀಲ್ದಾರ್ ಜಿ. ಮೇಘನಾ ಡಿವೈಎಸ್‌ಪಿ ಪ್ರಮೋದ್‌ಕುಮಾರ್ ಭೇಟಿ ನೀಡಿದರು. ಮಣ್ಣು ತೆರವುಗೊಳಿಸಿದ್ದು ವಾಹನಗಳ ಸಂಚಾರ ಆರಂಭಿಸಲಾಗಿದೆ. ‘ಸಕಲೇಶಪುರ–ಹೆಗ್ಗೆದ್ದೆ ನಡುವೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿಗಾಗಿ 90 ಡಿಗ್ರಿಯಲ್ಲಿ ಮಣ್ಣು ತೆಗೆದಿದ್ದು ತಡೆಗೋಡೆ ಕಟ್ಟದಿರುವುದರಿಂದ ಬಾಳ್ಳುಪೇಟೆಯಿಂದ ಹೆಗ್ಗದ್ದೆವರೆಗೆ ಸುಮಾರು 20ಕ್ಕೂ ಹೆಚ್ಚು ಕಡೆ ಮಣ್ಣು ಕುಸಿಯುತ್ತಿದ್ದು ವಾಹನ ಸವಾರರು ಅಪಾಯದಲ್ಲಿದ್ದಾರೆ’ ಎಂದು ಸ್ಥಳೀಯರು ತಿಳಿಸಿದ್ದಾರೆ. ತಾಲ್ಲೂಕಿನ ಮಾರನಹಳ್ಳಿ ಪೊಲೀಸ್ ಚೆಕ್‌ಪೋಸ್ಟ್ ಮುಂಭಾಗದ ಚಿಕ್ಕ ಸೇತುವೆ ಕೊಚ್ಚಿ ಹೋಗಿದೆ. ಹೇಮಾವತಿ ನದಿ ಪಕ್ಕದ ಹೊಳೆ ಮಲ್ಲೇಶ್ವರ ದೇವಸ್ಥಾನದ ಮೇಲೆ ಒಣಗಿದ ಮರದ ತುಂಡು ಬಿದ್ದು ಚಾವಣಿ ಜಖಂಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಬುಧವಾರ 25862 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.