ADVERTISEMENT

ಜೋಶಿ, ಅಂಗಡಿ, ಸವದಿ, ಶೆಟ್ಟರ್‌ ನಾಲಾಯಕ್‌: ಡಿ.ಕೆ ಶಿವಕುಮಾರ್‌

ಹುಬ್ಬಳ್ಳಿಯಲ್ಲಿ ಶಾಸಕ ಡಿ.ಕೆ.ಶಿವಕುಮಾರ್‌ ಬೃಹತ್‌ ರೋಡ್‌ ಶೋ; ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 14:02 IST
Last Updated 21 ನವೆಂಬರ್ 2019, 14:02 IST
ಹುಬ್ಬಳ್ಳಿಯಲ್ಲಿ ಗುರುವಾರ ರೋಡ್‌ಶೋ ನಡೆಸಿದ ಶಾಸಕ ಡಿ.ಕೆ.ಶಿವಕುಮಾರ್‌ ಅವರಿಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ಅವರು ಸೇಬಿನ ಹಣ್ಣಿನ ಬೃಹತ್‌ ಹಾರವನ್ನು ಕ್ರೇನ್‌ ಮೂಲಕ ಹಾಕಿ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ಗುರುವಾರ ರೋಡ್‌ಶೋ ನಡೆಸಿದ ಶಾಸಕ ಡಿ.ಕೆ.ಶಿವಕುಮಾರ್‌ ಅವರಿಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ಅವರು ಸೇಬಿನ ಹಣ್ಣಿನ ಬೃಹತ್‌ ಹಾರವನ್ನು ಕ್ರೇನ್‌ ಮೂಲಕ ಹಾಕಿ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ‘ಮಹದಾಯಿ ನದಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಅನುಷ್ಠಾನ ಸಂಬಂಧ ಕೇಂದ್ರ ಸರ್ಕಾರದಿಂದ ಗೆಜೆಟ್‌ ನೋಟಿಪಿಕೇಶನ್‌ ಹೊರಡಿಸಲು ವಿಫಲರಾಗಿರುವ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಸಚಿವ ಜಗದೀಶ ಶೆಟ್ಟರ್‌ ನಾಲಾಯಕ್‌ ಇದ್ದಾರೆ. ತಕ್ಷಣವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಶಾಸಕ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹದಾಯಿ ರಾಜ್ಯದ ಮತ್ತು ರೈತರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಮಹದಾಯಿ ನೀರಿಗಾಗಿ ಈ ಭಾಗದ ಜನರು ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಸ್ವಲ್ಪವೂ ಯತ್ನಿಸಿಲ್ಲ. ರೈತರ ನೆರವಿಗೆ ಬಾರದ ಬಿಜೆಪಿಯವರನ್ನು ವಿಧಾನಸಭೆ ಉಪ ಚುನಾವಣೆಯಲ್ಲಿ ಈ ಭಾಗದ ಮತದಾರರು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

‘ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಿರುವ ಅನರ್ಹ ಶಾಸಕರನ್ನು ಗೆಲ್ಲಿಸಿದರೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿರುವುದು ದೊಡ್ಡ ಭ್ರಷ್ಟಾಚಾರ. ಮತದಾರರಿಗೆ ಹಣ, ಉಡುಗೊರೆ ನೀಡಿದರೆ ಮಾತ್ರ ಚುನಾವಣಾ ಅಕ್ರಮವಲ್ಲ. ಮಂತ್ರಿ ಮಾಡುತ್ತೇನೆ ಎಂಬುದೂ ದೊಡ್ಡ ಆಮಿಷವೇ ಆಗಿದೆ. ಆದರೆ, ಈ ವಿಷಯದಲ್ಲಿ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ’ ಎಂದು ಆರೋಪಿಸಿದರು.

ADVERTISEMENT

ಚಡ್ಡಿ ಕಳಚುತ್ತಾರೆ: ‘17 ಜನ ನಮ್ಮ ಸ್ನೇಹಿತರು(ಅನರ್ಹ ಶಾಸಕರು) ಪಕ್ಷದಲ್ಲಿ ಬೆಳೆಸಿದವರನ್ನೇ ಬಿಟ್ಟಿಲ್ಲ; ಇನ್ನು ನಿಮ್ಮನ್ನು ಬಿಡುತ್ತಾರೆಯೇ? ನಿಮ್ಮ ಪ್ಯಾಂಟ್‌, ಶರ್ಟ್‌, ಚಡ್ಡಿ ಎಲ್ಲವನ್ನೂ ಕಳಚಿ ನಡು ಬೀದಿಯಲ್ಲಿ ನಿಲ್ಲಿಸುತ್ತಾರೆ’ ಎಂದು ಬಿಜೆಪಿಯವರಿಗೆ ಶಿವಕುಮಾರ್‌ ಎಚ್ಚರಿಕೆ ನೀಡಿದರು.

ಅದ್ಧೂರಿ ಸ್ವಾಗತ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧಿತರಾಗಿ ಜೈಲಿನಿಂದ ಬಿಡುಗಡೆಯಾದ ಬಳಿಕ ಗುರುವಾರ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. 200 ಕೆ.ಜಿ.ತೂಕದ 25 ಅಡಿ ಉದ್ದದ ಸೇಬಿನ ಹಣ್ಣಿನ ಹಾಗೂ ಸೇವಂತಿಗೆ, ಗುಲಾಬಿ ಹೂಗಳಿಂದ ತಯಾರಿಸಿದ ಬೃಹದಾಕಾರದ ಹಾರಗಳನ್ನು ಕ್ರೇನ್‌ ಮೂಲಕ ಹಾಕಿ ಸ್ವಾಗತ ಕೋರಿದರು. ‌

ವಾದ್ಯ ಮೇಳಗಳೊಂದಿಗೆ ವಿಮಾನ ನಿಲ್ದಾಣದಿಂದ ಗೋಕುಲ ಗಾರ್ಡನ್‌ ವರೆಗೆ ಶಿವಕುಮಾರ್‌ ರೋಡ್‌ ಶೋ ನಡೆಸಿದರು.‌ ‘ಮುಂದಿನ ಮುಖ್ಯಮಂತ್ರಿ ಡಿ.ಕೆಗೆ ಜೈಯವಾಗಲಿ’ ಎಂಬ ಘೋಷಣೆ ಹಾಗೂ ‘ಬಂದಾ ಬಂದಾ ಡಿ.ಕೆ ಸಾಹೇಬ’ ಹಾಡು ಅನುರಣಿಸಿತು. ಬಳಿಕ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡ ಅವರು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.