ADVERTISEMENT

ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಮತ್ತೆ ನಾಳೆಗೆ ಮುಂದೂಡಿಕೆ

ಹಣ ಅಕ್ರಮ ವರ್ಗಾವಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 3:59 IST
Last Updated 25 ಸೆಪ್ಟೆಂಬರ್ 2019, 3:59 IST
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)   

ನವದೆಹಲಿ:ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆಯನ್ನು ಇ.ಡಿ (ಜಾರಿ ನಿರ್ದೇಶನಾಲಯ) ವಿಶೇಷ ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದೆ.

ಶಿವಕುಮಾರ್ ಅರ್ಜಿಯ ವಿಚಾರಣೆ ನಡೆಸಿದವಿಶೇಷ‌ ನ್ಯಾಯಾಧೀಶ ಅಜಯ್ ಕುಮಾರ್‌ ಕುಹಾರ್ ಅವರು ನಾಳೆ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿದರು.ಇ.ಡಿ.‌ಪರ ವಕೀಲ ಕೆ.ಎಂ.‌ನಟರಾಜ್ ವಿಚಾರಣೆಗೆ ಹಾಜರಾಗದ್ದರಿಂದ ನ್ಯಾಯಾಧೀಶರು ಈ ನಿರ್ಧಾರ ಪ್ರಕಟಿಸಿದರು.

ಹೀಗಾಗಿ ನಾಳೆವರೆಗೆ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲೇ ಶಿವಕುಮಾರ್ ಇರಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯವು,ಅನಾರೋಗ್ಯಕ್ಕೆ ಒಳಗಾಗಿರುವ ಶಿವಕುಮಾರ್‌ ಅವರನ್ನು ಮೊದಲು ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿ ವೈದ್ಯರ ಅಭಿಪ್ರಾಯ ಪಡೆಯಬೇಕು. ವೈದ್ಯರು ಸೂಚಿಸಿದರೆ ಅಲ್ಲೇ ದಾಖಲಿಸಿ ಚಿಕಿತ್ಸೆ ಮುಂದುವರಿಸಬೇಕು ಇಲ್ಲವೇ ಜೈಲಿಗೆ ಕಳುಹಿಸಬೇಕು ಎಂದು ನಿರ್ದೇಶನ ನೀಡಿತ್ತು.

‘ಮಾರುಕಟ್ಟೆ ಮೌಲ್ಯ ನಮೂದಿಸದಿರುವುದು ಅಕ್ರಮ ಹೇಗೆ?’:ಡಿಕೆಶಿ ಪುತ್ರಿ ಐಶ್ವರ್ಯ ಅವರ ಹೆಸರಲ್ಲಿರುವ‌ ₹ 108 ಕೋಟಿ ಆಸ್ತಿಯಲ್ಲಿ ₹ 78 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆ ಇದ್ದು, ₹ 40 ಕೋಟಿ ಸಾಲ‌ ಇದೆ. ಆಸ್ತಿ ಪಿತ್ರಾರ್ಜಿತವಾಗಿ ಬಂದಿದೆ.ಐಶ್ವರ್ಯ ಕಾಕಾಲಕ್ಕೆ ಆದಾಯ ತೆರಿಗೆ ಪಾವತಿಸಿ ರಿಟರ್ನ್ ‌ಫೈಲ್‌ ಮಾಡಿದ್ದಾರೆ. ಅಜ್ಜಿ ಗೌರಮ್ಮ ಅವರಿಂದಲೂ ಆಸ್ತಿ ಬಂದಿದೆ. ಇದರಲ್ಲಿ ಹಣ ಅಕ್ರಮ ವರ್ಗಾವಣೆ ಸಾಧ್ಯತೆ ಎಲ್ಲಿದೆ ಎಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಶಿವಕುಮಾರ್ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಅದರಲ್ಲಿ ಖರೀದಿ ಮೌಲ್ಯವನ್ನು ನಮೂದಿಸಿದ್ದಾರೆ. ಮಾರುಕಟ್ಟೆ ಮೌಲ್ಯ ನಮೂದಿಸದಿರುವುದು‌ ಅಕ್ರಮ ಹೇಗಾಗಲಿದೆ? ಎಂದೂ ಸಿಂಘ್ವಿ ಪ್ರಶ್ನಿಸಿದರು.

‘ಹಣ ಅಕ್ರಮ ವರ್ಗಾವಣೆಯ ಆರೋಪದೊಂದಿಗೆ ಒಟ್ಟು ಆಸ್ತಿ ಮೊತ್ತ ಹೆಚ್ಚು ಇದೆ‌ ಎಂದು ತಿಳಿಸಲಾಗಿದೆ. 50 ವರ್ಷ‌ ಹಳೆಯ ಟ್ರಾನ್ಸ್‌ಪೋರ್ಟ್ ವ್ಯವಹಾರ ಮಾಡುವ ಸುನಿಲ್ ಶರ್ಮಾ ಅವರು ಆದಾಯ ತೆರಿಗೆ ಕಟ್ಟಿದ್ದಾರೆ. ಆದರೂ ಅವರನ್ನೂ ಅಕ್ರಮದಡಿ ಭಾಗಿ‌ ಮಾಡಲಾಗಿದೆ. ಮದ್ಯ ಮತ್ತು ಟ್ರಾನ್ಸ್‌ಪೋರ್ಟ್ ವ್ಯವಹಾರದಲ್ಲಿ ನೇರವಾಗಿ ನಗದು ಕೈಸೇರುತ್ತದೆ. ಅದಕ್ಕೆ ಅವರು ತೆರಿಗೆ ಕಟ್ಟಿದ್ದು, ಬೇರೆ ಬಣ್ಣ ಬಳಿಯುವುದು ಬೇಡ. ನಿರ್ಮಾಣ, ಮದ್ಯ ಮತ್ತು ಟ್ರಾನ್ಸ್‌ಪೋರ್ಟ್ ವ್ಯವಹಾರ ಹೊಂದಿರುವ‌ ಇವರು ಅಕ್ರಮ ಮಾಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರ. ಸಚಿನ್ ನಾರಾಯಣ ಅವರೂ ವ್ಯವಹಾರದಲ್ಲಿ ತೊಡಗಿದ್ದಾರೆ’ ಎಂದೂ ಸಿಂಘ್ವಿ ಹೇಳಿದರು.

‘ಒಕ್ಕಲಿಗರು ಕೃಷಿ ಜಮೀನು‌ ಹೊಂದಿದ್ದಾರೆ. ನಗರೀಕರಣದಿಂದ ಅವರ‌ ಜಮೀನಿಗೆ ಭಾರಿ ಬೆಲೆ ಬಂದಿದೆ. ಡಿಕೆಶಿ ಒಕ್ಕಲಿಗರಾಗಿದ್ದು ಅವರ ಸಂಬಂಧಿಗಳು, ಆಪ್ತರು ಅಂಥ ಆಸ್ತಿ ಮಾಲೀಕರು. ಆದರೆ ಅದನ್ನೇ ಅಕ್ರಮ ಎಂದು ಆರೋಪ ಮಾಡಲಾಗಿದೆ’ ಎಂದು ಸಿಂಘ್ವಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.