ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಚುನಾವಣೆಗೆ ಹಣ ಮುಖ್ಯವಲ್ಲ, ಸಂಘಟನಾ ಸಾಮರ್ಥ್ಯ ಮುಖ್ಯ. ಹೀಗಾಗಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ನೀವು ನಾಯಕರುಗಳ ಹಿಂದೆ ಓಡಾಡಿದರೆ ಪ್ರಯೋಜನವಿಲ್ಲ. ಬೂತ್ ಮಟ್ಟದಲ್ಲಿ ಸಾಮರ್ಥ್ಯ ಪ್ರದರ್ಶಿಸಿದರೆ ಮಾತ್ರ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ’ ಎಂದರು.
‘ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನಗೆ ಸಾತನೂರು ಕ್ಷೇತ್ರದಿಂದ ಟಿಕೆಟ್ ಸಿಕ್ಕಿತ್ತು. ಏಕೆಂದರೆ, ನನ್ನ ಸಂಘಟನಾ ಸಾಮರ್ಥ್ಯ ಅಷ್ಟು ಚೆನ್ನಾಗಿತ್ತು. ಯುವ ನಾಯಕನಾಗಿ ನಾನು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೆ’ ಎಂದು ಹೇಳಿದರು.
‘ಪಂಚಾಯತ್‌ರಾಜ್ ಕಾಯ್ದೆಯ 73, 74ನೇ ತಿದ್ದುಪಡಿ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ನೂರಾರು ನಾಯಕರು ಹುಟ್ಟಿಕೊಂಡರು. ನಾನು, ರಾಮಲಿಂಗಾ ರೆಡ್ಡಿ, ಬಿಜೆಪಿಯ ಎಸ್. ಸುರೇಶ್ ಕುಮಾರ್, ವಿ. ಸೋಮಣ್ಣ ಹೀಗೆ ಅನೇಕರು ಸ್ಥಳೀಯ ಸಂಸ್ಥೆಗಳ ಮೂಲಕವೇ ಬೆಳೆದವರು. ಬೆಂಗಳೂರಿನಲ್ಲಿ ನೂತನ ಐದು ಪಾಲಿಕೆಗಳನ್ನು ರಚನೆ ಮಾಡಿರುವ ಕಾರಣಕ್ಕೆ 500ಕ್ಕೂ ಹೆಚ್ಚು ಹೊಸ ನಾಯಕರಿಗೆ ಅವಕಾಶ ಸಿಗಲಿದೆ’ ಎಂದರು.
‘ಪಕ್ಷದ ಅನೇಕ ಘಟಕಗಳ ಜವಾಬ್ದಾರಿ ತೆಗೆದುಕೊಂಡವರಿಗೆ ಅತ್ಯುತ್ತಮ ಸ್ಥಾನಗಳನ್ನು ನೀಡಲಾಗಿದೆ. ಗ್ಯಾರಂಟಿ ಸಮಿತಿಯಲ್ಲಿಯೂ ಸ್ಥಾನ ನೀಡಲಾಗಿದೆ’ ಎಂದ ಅವರು, ‘ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲ ಘಟಕಗಳು ಕೆಲಸ ಮಾಡಿದರೆ 2028ರಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ’ಎಂದರು.
‘ಕಳೆದ ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಮೂಲಕ ಏಳು ಸಾವಿರ ಖಾಸಗಿ ವ್ಯಕ್ತಿಗಳಿಗೆ ಬಿಎಲ್‌ಒ ಸ್ಥಾನ ನೀಡಿ ಬಿಜೆಪಿ ಅಕ್ರಮ ಎಸಗಿತ್ತು. ಈ ಅಕ್ರಮವನ್ನು ನಾನು, ಪಕ್ಷದ ಉಸ್ತುವಾರಿ ಸುರ್ಜೇವಾಲಾ ಹೋರಾಟ ಮಾಡಿ ನಿಲ್ಲಿಸಿದೆವು. ರಾಹುಲ್ ಗಾಂಧಿಯವರು ಕೂಡಾ ಇದರ ಬಗ್ಗೆ ದನಿ ಎತ್ತಿದ್ದರು’ ಎಂದು ಹೇಳಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ ಬಾನು ಚಿಬ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.