ಬೆಂಗಳೂರು: ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿ ಹಲವು ಮಂದಿಗೆ ಬಿಡಿಎ ನಿವೇಶನ ಮಂಜೂರು ಮಾಡಿರುವುದನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಡಿಎ ಆಯುಕ್ತರಾಗಿದ್ದ ರಾಜೇಶ್ ಗೌಡ ಅಮಾನತಿಗೆ, ಫಲಾನುಭವಿ ಸಚಿವರ ವಜಾಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದ ಕಾರಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಎಂ.ಬಿ.ರಾಜೇಶ ಗೌಡ ಅವರನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಆದೇಶದ ಬಗ್ಗೆ ಅವಿಧೇಯತೆ ತೋರಿದ್ದಕ್ಕೆ ರಾಜೇಶ ಗೌಡ ಅವರನ್ನು ಪ್ರಾಧಿಕಾರದಿಂದ ವರ್ಗಾವಣೆ ಮಾಡಬೇಕು ಎಂದೂ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ‘ಮರುಸ್ವಾಧೀನ ಮತ್ತು ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕವೇ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಸುಪ್ರೀಂ ಕೋರ್ಟ್ 2021 ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿ ಹಲವು ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಖಂಡನೀಯ’ ಎಂದಿದ್ದಾರೆ.
‘ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಿಡಿಎ ಆಯುಕ್ತ ಎಂ.ಬಿ ರಾಜೇಶ್ ಗೌಡ ಅವರನ್ನು ಹುದ್ದೆಯಿಂದ ಅಮಾನತು ಮಾಡಬೇಕು. ಜೊತೆಗೆ ಫಲಾನುಭವಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಮಾನ್ಯ ಮುಖ್ಯಮಂತ್ರಿಗಳು ಈ ಹಗರಣ ಬೇರೆ ರೂಪ ಪಡೆಯುವ ಮುನ್ನವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ’ ಎಂದಿದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಶುಕ್ರವಾರ ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.