
ನವದೆಹಲಿ: 'ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಯವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದು, ಸಚಿವ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ಸಿಕ್ಕಿದೆ ಎನ್ನುವ ಮಾಹಿತಿ ಬಗ್ಗೆ ಕೇಳಿದಾಗ, 'ಅವರು ಯಾರನ್ನು ಭೇಟಿ ಮಾಡಿದ್ದಾರೋ, ಏನನ್ನು ಮಾತನಾಡಿದ್ದಾರೋ ನನಗೆ ತಿಳಿದಿಲ್ಲ. ಮುಖ್ಯಮಂತ್ರಿಯೊಬ್ಬರು ಭೇಟಿಗೆ ಬಂದಾಗ ಸಮಯ ನೀಡುವ ವಾಡಿಕೆ ಇದೆ' ಎಂದರು.
ಪಕ್ಷದ ಶಿಸ್ತಿನ ಸಿಪಾಯಿ ನೀವು ಎಂದು ಮಾಧ್ಯಮದವರು ಹೇಳಿದಾಗ, 'ಪಕ್ಷ ಹೇಗೆ ಹೇಳುತ್ತದೆಯೋ ಆ ರೀತಿ ಕೇಳಿಕೊಂಡು ಹೋಗಬೇಕು ನಾವೆಲ್ಲ. ಅಷ್ಟೇ ನಮ್ಮ ಕೆಲಸ' ಎಂದರು.
ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಹಾಗೂ ಹೈಕಮಾಂಡ್ ಅನ್ನು ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದಾಗ, 'ಭೇಟಿಯಾಗುವುದು ತಪ್ಪೇನ್ರೀ? ನೀವುಗಳು ಬೇರೆ ಪಕ್ಷದವರ ಬಳಿ ಮಾತನಾಡಿದಂತೆ ಮಾತನಾಡುತ್ತಿದ್ದೀರಿ. ಅವರು ಎಲ್ಲರನ್ನೂ ಭೇಟಿ ಮಾಡುವ ಹಕ್ಕು ಹೊಂದಿದ್ದಾರೆ. ಪ್ರಧಾನ ಮಂತ್ರಿ, ಗೃಹಸಚಿವರು, ನಿಮ್ಮನ್ನು, ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಬಹುದು' ಎಂದರು.
ಸಂಪುಟ ಪುನಾರಚನೆ ಬಗ್ಗೆ ನೀವು ಹೈ ಕಮಾಂಡ್ ಜತೆ ಮಾತನಾಡುವಿರಾ ಎಂದು ಕೇಳಿದಾಗ, 'ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಅವರೇನಾದರೂ ಕೇಳಿದರೆ ನನಗೆ ಏನು ಬೇಕೋ ಅದನ್ನು ಹೇಳುತ್ತೇನೆ. ಹೈಕಮಾಂಡ್ ನವರು ನನ್ನನ್ನು ಏನು ಕೇಳುತ್ತಾರೆ, ಏನನ್ನು ಕೇಳುವುದಿಲ್ಲ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ' ಎಂದರು.
'ಹೈಕಮಾಂಡ್ ಭೇಟಿ ಯಾವಾಗ ಎನ್ನುವುದರ ಬಗ್ಗೆ ತಿಳಿದಿಲ್ಲ. ಭಾನುವಾರ ಭೇಟಿಯಾಗಬಹುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.