
ಬೆಂಗಳೂರು: ‘ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳ ನಿರ್ಮಾಣ ವಿಚಾರದಲ್ಲಿ ಆಸಕ್ತಿ ತೋರಿರುವ ಮತ್ತು ತೋರದವರ ಕುರಿತು ಎರಡು ದಿನಗಳಲ್ಲಿ ಎಐಸಿಸಿ ನಾಯಕರಿಗೆ ಮಾಹಿತಿ ನೀಡುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಭವನ್ ಟ್ರಸ್ಟ್ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ‘ಲಿಖಿತ ಮಾಹಿತಿ ನೀಡುವಂತೆ ವರಿಷ್ಠರು ಸೂಚಿಸಿದ್ದಾರೆ’ ಎಂದರು.
‘ಯಾವ ತಾಲ್ಲೂಕಿನಲ್ಲಿ ಕಚೇರಿ ಆಗಿದೆ, ಯಾವ ತಾಲ್ಲೂಕಿನಲ್ಲಿ ಆಗಿಲ್ಲ, ಕಚೇರಿ ನಿರ್ಮಾಣ ವಿಚಾರದಲ್ಲಿ ಯಾರು ಆಸಕ್ತಿ ವಹಿಸಿದ್ದಾರೆ, ಯಾರು ಆಸಕ್ತಿ ವಹಿಸಿಲ್ಲ ಎನ್ನುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು’ ಎಂದರು.
‘ರಾಜ್ಯದಲ್ಲಿರುವ ಪಕ್ಷದ ಆಸ್ತಿಗಳು, ದಾಖಲೆಗಳು, ತೆರಿಗೆ ಪಾವತಿ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ನೂತನ ಕಚೇರಿ ನಿರ್ಮಾಣ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಎಐಸಿಸಿ ನಾಯಕರು ಮಾಹಿತಿ ಪಡೆದರು. ಗಾಂಧಿ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಸಿದ್ಧವಾಗಿದೆ’ ಎಂದರು.
ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಗೋಪಿನಾಥ್ ಪಳನಿಸ್ವಾಮಿ, ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ರಹೀಂ ಖಾನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.