ADVERTISEMENT

ಸರ್ಕಾರದ ವಿರುದ್ಧ 20ಕ್ಕೆ ‘ಜನಧ್ವನಿ’: ಡಿ.ಕೆ.ಶಿವಕುಮಾರ್‌

ರಾಜ್ಯದಾದ್ಯಂತ ಹೋರಾಟ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 20:58 IST
Last Updated 10 ಆಗಸ್ಟ್ 2020, 20:58 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಕೊರೊನಾ ಭ್ರಷ್ಟಾಚಾರ ಹಾಗೂ ಅತಿವೃಷ್ಟಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಇದೇ 20 ರಂದು ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ‘ಜನ ಧ್ವನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ 20ರಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ. ಈ ಇಬ್ಬರು ನಾಯಕರು ಉಳುವವರಿಗೆ ಭೂಮಿ ಸಿಗುವ ಕಾನೂನು ತಂದುಕೊಟ್ಟವರು. ಜನರ ಕಲ್ಯಾಣಕ್ಕಾಗಿ ಭೂಸುಧಾರಣೆ ಕಾಯ್ದೆ ಜಾರಿಗೆ ತಂದವರು. ಆದರೆ, ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ಜನರ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಅಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಧರಣಿ ನಡೆಸಲಾಗುವುದು. ನಂತರ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಭೂ ಸುಧಾರಣಾ ಕಾಯ್ದೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೋರಾಟ ಹಾಗೂ ನಮ್ಮ ಧ್ವನಿ ಎಲ್ಲವೂ ಪಕ್ಷದ ಧ್ವನಿಯಾಗಿದ್ದು, ಒಂದೇ ಧ್ವನಿಯಾಗಿದೆ. ಅದೇ ಜನ ಧ್ವನಿ’ ಎಂದು ಅವರು ಪ್ರತಿಪಾದಿಸಿದರು.

₹10 ಸಾವಿರ ಕೋಟಿ ಪ್ಯಾಕೇಜ್ ನೀಡಲಿ: ‘ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ ಕಾವೇರಿ ಜಲಾನಯನ ಪ್ರದೇಶಗಳ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ₹10 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದರು.

‘ಈ ವಿಚಾರವಾಗಿ ರಾಜ್ಯದ ಸಂಸದರ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ವಿಧಾನಮಂಡಲದ ಅಧಿವೇಶನ ಕರೆದು ಈ ವಿಚಾರವಾಗಿ ಚರ್ಚಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.