ADVERTISEMENT

ಕೊನೆಯವರೆಗೂ ಹೋರಾಟ: ಡಿಕೆಶಿ

ಮುಖಂಡರೊಂದಿಗೆ ಭೇಟಿ... ಬೆಂಬಲಿಗರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 18:10 IST
Last Updated 24 ಅಕ್ಟೋಬರ್ 2019, 18:10 IST
ಜಾಮೀನು ಪಡೆದ ಬಳಿಕ ಶಾಸಕ ಡಿ ಕೆ ಶಿವಕುಮಾರ್‌ ಅವರು ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.        ಫೋಟೊ ಟ್ವಿಟರ್
ಜಾಮೀನು ಪಡೆದ ಬಳಿಕ ಶಾಸಕ ಡಿ ಕೆ ಶಿವಕುಮಾರ್‌ ಅವರು ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.        ಫೋಟೊ ಟ್ವಿಟರ್   

ನವದೆಹಲಿ: ‘ನನಗೆ ಕಾನೂನಿನ ಮೇಲೆ ಅಪಾರ ಗೌರವ ಇದೆ. ಕೊನೆಯವರೆಗೂ ಹೋರಾಡುವ ಮೂಲಕ ಸಂಕಷ್ಟದಿಂದ ಹೊರಬರುತ್ತೇನೆ’ ಎಂದು ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವುದೇ ತಪ್ಪು ಮಾಡಿಲ್ಲ. ಅಂತೆಯೇ ಜನಬೆಂಬಲ ದೊರೆತಿದೆ. ಕಷ್ಟಕಾಲದಲ್ಲಿ ಬೆಂಬಲ, ಧೈರ್ಯ ನೀಡಿದವರಿಗೆ ಧನ್ಯವಾದಗಳು’ ಎಂದ ಅವರು, ‘ಶುಕ್ರವಾರ ಅಥವಾ ಶನಿವಾರ ಬೆಂಗಳೂರಿಗೆ ತೆರಳುತ್ತೇನೆ’ ಎಂದರು.

‘ಜಾರಿ ನಿರ್ದೇಶನಾಲಯದ (ಇ.ಡಿ)ಸಮನ್ಸ್‌ ರದ್ದತಿ ಕೋರಿ ತಾಯಿ ಹಾಗೂ ಪತ್ನಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಇದೇ 30ಕ್ಕೆ ಮುಂದೂಡಿದೆ. ಬೆಂಗಳೂರಿನಲ್ಲೇ ವಿಚಾರಣೆಗೆ ಕೋರಲಾಗಿದೆ. ಎಲ್ಲೇ ವಿಚಾರಣೆ ನಡೆಸಿದರೂ ಉತ್ತರ ನೀಡಲು ನಮ್ಮ ಕುಟುಂಬ ಸಿದ್ಧವಿದೆ’ ಎಂದು ಅವರು ಹೇಳಿದರು.

ADVERTISEMENT

‘ವಿವಿಧ ಪಕ್ಷಗಳ ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ. ಬಂಧನ ಖಂಡಿಸಿ ಕೇರಳದಲ್ಲೂ ಪಂಜಿನ ಮೆರವಣಿಗೆ ನಡೆಸಲಾಗಿದೆ. ಬಂಧನದಲ್ಲಿದ್ದಾಗ ನಿತ್ಯ ನೂರಾರು ಬೆಂಬಲಿಗರು ನೋಡಲು ಬಂದಿದ್ದಾರೆ. ಅವರೇ ನನಗೆ ಶ್ರೀರಕ್ಷೆ’ ಎಂದರು.

‘ನಾನು ಕಾನೂನಿಗೆ ಬದ್ಧನಾಗಿರುವ ವ್ಯಕ್ತಿ. 7 ಬಾರಿ ಶಾಸಕನಾಗಿ, ಸರ್ಕಾರ ದಲ್ಲಿದ್ದು ಕಾನೂನು ರೂಪಿಸುವಲ್ಲಿ ಭಾಗಿಯಾಗಿದ್ದೇನೆ. ಚುನಾವಣಾ ಆಯೋಗದ ನಿಯಮಾನುಸಾರ ನನ್ನ ಆಸ್ತಿ ಘೋಷಿಸಿದ್ದೇನೆ. ಬೇರೆಯವರ ಆಸ್ತಿ ಘೋಷಣೆ, ನನ್ನ ಆಸ್ತಿ ಘೋಷಣೆ ಕುರಿತು ಬೆಂಗಳೂರಿನಲ್ಲಿ ವಿವರವಾಗಿ ಮಾತನಾಡುತ್ತೇನೆ’ ಎಂದು ಅವರು ವಿವರಿಸಿದರು.

ಕಿವಿಮಾತು: ಸ್ನೇಹಿತರು ಸೂಕ್ತ ಸಲಹೆ ನೀಡಿದ್ದಾರೆ. ಕೆಲವರು ಸನ್ಯಾಸತ್ವ ಸ್ವೀಕರಿಸುವಂತೆ ಹೇಳಿದ್ದರೆ, ರಾಜಕಾರಣವನ್ನೇ ಬಿಡುವಂತೆ ಇನ್ನು ಕೆಲವರು ಕಿವಿಮಾತು ಹೇಳಿದ್ದಾರೆ. ಈ ಬಗ್ಗೆ ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವರಿಷ್ಠರೊಂದಿಗೆ ಮಾತುಕತೆ

ಡಿ.ಕೆ. ಶಿವಕುಮಾರ್‌ ಅವರು ಗುರುವಾರ ಪಕ್ಷದ ಪ್ರಮುಖ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್‌ ಗಾಂಧಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ ಅವರು, ‘ಇದು ಸೌಹಾರ್ದಯುತ ಭೇಟಿಯಾಗಿತ್ತು. ನನಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.