
ನವದೆಹಲಿ: ‘ಈಗ ನಮ್ಮ ನಾಯಕರು ಸಂಸತ್ ಅಧಿವೇಶನದಲ್ಲಿ ಬ್ಯುಸಿ ಇದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತೊಂದರೆ ಕೊಡಲು ಹಾಗೂ ಮುಜುಗರ ಉಂಟು ಮಾಡಲು ಬಯಸುವುದಿಲ್ಲ‘ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮದುವೆ ಸಮಾರಂಭದಲ್ಲಿ ಭಾಗವಹಿಸಲು ನವದೆಹಲಿಗೆ ಬಂದಿರುವ ಅವರು ಬುಧವಾರ ರಾತ್ರಿ ಸುದ್ದಿಗಾರರ ಜತೆಗೆ ಮಾತನಾಡಿ, ‘ಯಾವುದೇ ನಾಯಕರನ್ನು ಭೇಟಿ ಮಾಡುವುದಿಲ್ಲ. ಗುರುವಾರ ಬೆಳಿಗ್ಗೆ 8ಕ್ಕೆ ಬೆಂಗಳೂರಿಗೆ ಮರಳುತ್ತೇನೆ‘ ಎಂದರು.
ಮತಕಳವು ವಿರುದ್ಧ ಇದೇ 14ರಂದು ನಡೆಯಲಿರುವ ಪ್ರತಿಭಟನಾ ಸಮಾವೇಶದ ಪೂರ್ವ ತಯಾರಿ ನೋಡಿಕೊಳ್ಳುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ. ಈ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ‘ಎಂದರು.
ಇದೇ 8ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಮೇಕೆದಾಟು ಯೋಜನೆಯ ಕುರಿತು ಎಲ್ಲ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾವು ನಮ್ಮ ವಿಚಾರ ಪ್ರತಿಪಾದಿಸಬೇಕು. ಇಲ್ಲದಿದ್ದರೆ ಸಭೆ ಮುಂದೂಡಿಕೆಯಾಗುತ್ತಾ ಹೋಗುತ್ತದೆ. ಯೋಜನೆಯ ವಿವರಗಳನ್ನು ಅವರಿಗೆ ನಾವು ನೀಡಬೇಕು. ಇದಕ್ಕೆ 6 ತಿಂಗಳ ಕಾಲಾವಕಾಶ ಇದೆ" ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.