ADVERTISEMENT

ನಾನು ಹೇಡಿಯಲ್ಲ; ಹೆದರಿ ಓಡಿಹೋಗುವುದಿಲ್ಲ –ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 14:11 IST
Last Updated 19 ಸೆಪ್ಟೆಂಬರ್ 2018, 14:11 IST
   

ಬೆಂಗಳೂರು:‘ನನ್ನ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮೊಕದ್ದಮೆ ದಾಖಲಿಸಿರುವುದರಿಂದ ಹೆದರಿ ಓಡಿಹೋಗುವುದಿಲ್ಲ. ನಾನು ಬಂಧನಕ್ಕೆ ಹೆದರುವ ಹೇಡಿಯಲ್ಲ. ಎಂತಹದೇ ಪರಿಸ್ಥಿತಿ ಬಂದರೂ ಧೈರ್ಯವಾಗಿ ಎದುರಿಸುತ್ತೇನೆ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಬಿಜೆಪಿ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.

‘ನಾನು ಗುಜರಾತ್‌ ಕಾಂಗ್ರೆಸ್‌ ಶಾಸಕರಿಗೆ ಬೆಂಗಳೂರಿನಲ್ಲಿ ರಕ್ಷಣೆ ನೀಡಿದ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 82 ಕಡೆ ದಾಳಿ ನಡೆಸಿದ್ದಾರೆ. ನನ್ನ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಆಪ್ತರಿಗೆ ಕಿರುಕುಳ ನೀಡಿದ್ದಾರೆ. ಬಲವಂತದಿಂದ ಹೇಳಿಕೆ ಪಡೆದು ಸಹಿ ಹಾಕಿಸಿಕೊಂಡಿದ್ದಾರೆ’ ಎಂದು ಶಿವಕುಮಾರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸ್ವಾಯತ್ತ ಸಂಸ್ಥೆಗಳು. ಬಿಜೆಪಿ ನಾಯಕರು ಇವುಗಳನ್ನು ಬಳಸಿಕೊಂಡು ನನ್ನ ಮತ್ತು ನನ್ನ ಪಕ್ಷದ ವರ್ಚಸ್ಸು ಹಾಳುಮಾಡಲು ಹೊರಟಿದ್ದಾರೆ. ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಸರ್ಕಾರ ಉರುಳಿಸಬಹುದು ಎಂದು ಹಗಲುಗನಸು ಕಾಣುತ್ತಿದ್ದಾರೆ. ಇದು ಕೇವಲ ಭ್ರಮೆ’ ಎಂದುಗುಡುಗಿದರು.

ADVERTISEMENT

‘ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಂಧನಕ್ಕೆ ಹೆದರಿ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒತ್ತಡಕ್ಕೊಳಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಸಹಾಯಕತೆ ಅರ್ಥವಾಗುತ್ತದೆ. ಬಿಜೆಪಿ ನಾಯಕರ ಜಾತಕಗಳೂ ನನ್ನ ಬಳಿ ಇವೆ. ಸಮಯ ಬಂದಾಗ ಅವೆಲ್ಲವನ್ನೂ ಬಿಡುಗಡೆ ಮಾಡುತ್ತೇನೆ’ ಎಂದುಸವಾಲು ಹಾಕಿದರು.

ಐ.ಟಿ ಅಧಿಕಾರಿಗಳು ನನ್ನ ಮನೆಯಿಂದ ಡೈರಿ ವಶಪಡಿಸಿಕೊಂಡಿರುವುದಾಗಿ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ. ನನ್ನ ಮನೆಯಲ್ಲಿ ಏನೇನು ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಲಿ. ಆ ಡೈರಿ ಯಾವುದು. ಎಲ್ಲಿ ಸೃಷ್ಟಿಯಾಯಿತು ಎಂಬುದು ನನಗೂ ಗೊತ್ತಿಗೆ ಎಂದುಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ನಾಯಕರ ಹೆಸರಿರುವ ಸಹರಾ ಡೈರಿ, ಜೈನ್‌ ಡೈರಿಗಳ ಬಗ್ಗೆಯೂ ಅವರು ಮಾತನಾಡಲಿ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಜಲ ಸಂಪನ್ಮೂಲ ಸಚಿವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.