ADVERTISEMENT

ಕೋಮು ಸೌಹಾರ್ದ, ಕಾನೂನು ಸುವ್ಯವಸ್ಥೆ ಈಗ ಸರ್ಕಾರದ ಹೊಣೆ: ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2022, 9:10 IST
Last Updated 15 ಮಾರ್ಚ್ 2022, 9:10 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ಹಿಜಾಬ್‌ ಪ್ರಕರಣದಲ್ಲಿ ಹೈಕೋರ್ಟ್‌ ತನ್ನ ತೀರ್ಪನ್ನೇನೋ ನೀಡಿದೆ. ಆದರೆ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ, ಕೋಮು ಸೌಹಾರ್ದ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿರ್ಬಂಧಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳನ್ನು ಮಂಗಳವಾರ ವಜಾ ಮಾಡಿರುವ ಹೈಕೋರ್ಟ್‌, ಸರ್ಕಾರದ ಆದೇಶವನ್ನು ಎತ್ತಿ ಹಿಡಿದೆ. ಹಿಜಾಬ್‌ ಧರಿಸುವುದು ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಮಹತ್ವದ ಆದೇಶ ನೀಡಿದೆ. ಹಿಜಾಬ್‌ ನಿರ್ಬಂಧಿಸಿದ್ದ ಆದೇಶ ಪ್ರಶ್ನಿಸಿದ್ದ ಮನವಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ಪೀಠವು ಫೆಬ್ರವರಿ 25ರಂದು ವಿಚಾರಣೆಯನ್ನು ಪೂರ್ಣಗೊಳಿಸಿತ್ತು. ಅದನ್ನು ಇಂದು ಪ್ರಕಟಿಸಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಡಿಕೆಶಿ, ‘ಹಿಜಾಬ್ ವಿವಾದದಲ್ಲಿ ನನ್ನ ದೊಡ್ಡ ಆತಂಕವಿರುವುದು ಶಿಕ್ಷಣ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ. ಹಿಜಾಬ್‌ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯ ಜವಾಬ್ದಾರಿ ಕರ್ನಾಟಕ ಸರ್ಕಾರದ ಮೇಲಿದೆ.

ADVERTISEMENT

ಸರ್ಕಾರವು ಪ್ರಬುದ್ಧವಾಗಿ ನಡೆದುಕೊಳ್ಳಬೇಕು ಎಂದು ನಾನು ಈ ಮೂಲಕ ಮನವಿ ಮಾಡುತ್ತೇನೆ. ಶಾಲೆ–ಕಾಲೇಜುಗಳಲ್ಲಿ ಮತ್ತು ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆ, ಧರ್ಮ ಮತ್ತು ಲಿಂಗ ಲೆಕ್ಕಿಸದೆ ವಿದ್ಯಾರ್ಥಿಗಳ ಶಿಕ್ಷಣ, ಕೋಮು ಸೌಹಾರ್ದತೆಯ ಖಾತ್ರಿಯನ್ನು ಬಯಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.