ADVERTISEMENT

ಗೃಹ ಸಚಿವರಿಗೆ ಪಕ್ಷ ಮುಖ್ಯವಾಗಬಾರದು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 21:32 IST
Last Updated 27 ಜುಲೈ 2022, 21:32 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಮುಂದುವರಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಎದುರು ಕೆಪಿಸಿಸಿ ವತಿಯಿಂದ ಬುಧವಾರ ಕೂಡಾ ಮೌನ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ‘ಒಬ್ಬ ಗೃಹ ಸಚಿವ, ಪಕ್ಷ ಎಂದು ತೆಗೆದುಕೊಂಡರೆ ರಾಜ್ಯ ಉಳಿಯಲು ಸಾಧ್ಯವಿಲ್ಲ’ ಎಂದರು. ‘ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಹಿಜಾಬ್ ಹಿಂದಿನ ಶಕ್ತಿಗಳಿವೆ’ ಎಂಬ ಗೃಹ ಸಚಿವರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಈ ಘಟನೆಯ ಹಿಂದೆ ಯಾರಿದ್ದಾರೆಂದು ಡಿಜಿಪಿ ಅಥವಾ ಎಸ್‌ಪಿ ಹೇಳಬೇಕು. ಇಂಥ ಹತ್ಯೆಗಳು ರಾಜಕೀಯ ಕಾರಣಕ್ಕೆ ನಡೆಯಿತಾ, ವೈಯಕ್ತಿಕ ದ್ವೇಷವೇ, ಬೇರೆ ಏನಾದರೂ ಉದ್ದೇಶ ಇತ್ತೇ ಎಂದು ಪೊಲೀಸ್ ಅಧಿಕಾರಿಗಳು ಪ್ರಮಾಣೀಕರಿಸಬೇಕು’ ಎಂದರು.

ADVERTISEMENT

‘ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆಯವರ ಬಾಯಿಗೆ ಅಂಟಿಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಯಲಿ, ಆರೋಪಿಗಳನ್ನು ಬಂಧಿಸಲಿ, ಸತ್ಯಾಂಶ ಹೊರಗೆ ಬರಲಿ. ಇದರ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ ಅವರು, ‘ಕಾನೂನು ಸುವ್ಯವಸ್ಥೆ, ಗೃಹ ಸಚಿವ, ಸರ್ಕಾರದ ವೈಫಲ್ಯವೇ ಈ ಘಟನೆಗೆ ಕಾರಣ’ ಎಂದೂ ಅವರು ದೂರಿದರು.

‘ಪ್ರವೀಣ್ ಕೊಲೆಯ ಹಿಂದೆ ಕಾಂಗ್ರೆಸ್ ಬೆಂಬಲಿತ ಮತಾಂಧ ಶಕ್ತಿಗಳು ಇವೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೃಷ್ಣ ಬೈರೇಗೌಡ, ‘ತನಿಖೆಗೂ ಮೊದಲೇ ಬಣ್ಣ ಕಟ್ಟುವುದು ಸೂಕ್ತವಲ್ಲ. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.