ADVERTISEMENT

‘ಗ್ಯಾರಂಟಿ ಸಮಿತಿಗಳ ಕೈಯಲ್ಲಿ 2028ರ ಭವಿಷ್ಯ’: ಡಿ.ಕೆ. ಶಿವಕುಮಾರ್‌

ಬಡವರ ಕಲ್ಯಾಣಕ್ಕೆ ವರ್ಷಕ್ಕೆ ₹1 ಲಕ್ಷ ಕೋಟಿ ಮೀಸಲು

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 19:14 IST
Last Updated 15 ಜುಲೈ 2025, 19:14 IST
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು   

ಬೆಂಗಳೂರು: ‘ರಾಜ್ಯದಲ್ಲಿ 2028ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಭವಿಷ್ಯ ಗ್ಯಾರಂಟಿ ಸಮಿತಿಗಳ ಕೈಯಲ್ಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಭವನದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಬಜೆಟ್‌ನ ಶೇ 25ರಷ್ಟು ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸುತ್ತಿದೆ. ಸಮಾಜ ಹಾಗೂ ಬಡವರ ಕಲ್ಯಾಣಕ್ಕೆ ಸರ್ಕಾರ ₹ 1 ಲಕ್ಷ ಕೋಟಿ ‌ಹಣ ಮೀಸಲಿಟ್ಟಿದೆ. ₹ 50 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚವಾದರೆ, ₹ 19 ಸಾವಿರ ಕೋಟಿ ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್, ಸುಮಾರು ₹ 11 ಸಾವಿರ ಕೋಟಿ ಪಿಂಚಣಿಗಳಿಗೆ ವ್ಯಯವಾಗುತ್ತಿದೆ’ ಎಂದರು.

ADVERTISEMENT

‘ಗ್ಯಾರಂಟಿ ಸಮಿತಿಗಳು ಕೇವಲ ಪಂಚ ಗ್ಯಾರಂಟಿ ಯೋಜನೆಗೆ ಸೀಮಿತವಲ್ಲ. ಸರ್ಕಾರದ ಎಲ್ಲ ಜನಪರ ಯೋಜನೆಗಳ ಧ್ವನಿಯಾಗಬೇಕು. ಸಮಿತಿಯ ಪದಾಧಿಕಾರಿಗಳು ಗ್ಯಾರಂಟಿ ಯೋಜನೆ, ಖಾತಾ ದಾಖಲೆ ಹಂಚಿಕೆ ಹೆಸರಿನಲ್ಲಿ ಮನೆ ಬಾಗಿಲಿಗೆ ಹೋಗಿ ಜನರ ಮನ ಗೆಲ್ಲಬೇಕು. ಮುಂದೆ ಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದರು.

‘ಗ್ಯಾರಂಟಿ ಸಮಿತಿಗಳನ್ನು ರಚಿಸಿ, ಕಾರ್ಯಕರ್ತರು ಸರ್ಕಾರದ ಈ ಯೋಜನೆಯ ಭಾಗವಾಗುವಂತೆ ಮಾಡಬೇಕು. ಸರ್ಕಾರದ ಮುಖವಾಣಿಯಾಗಿ ಕೆಲಸ ಮಾಡಬೇಕೆಂದು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಸಲಹೆ ನೀಡಿದ್ದರು. ಅದರಂತೆ ಈ ಸಮಿತಿಗಳನ್ನು ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲ ವರ್ಗಗಳ 15 ಜನರನ್ನು ಗುರುತಿಸಿ ಅಧಿಕಾರ ನೀಡಲಾಗಿದೆ. ಆದರೆ, ಸಮಿತಿಯಲ್ಲಿ ಇರುವವರಿಗೆ ತಮ್ಮ ಬೆಲೆ ಏನೆಂಬುದು ಇನ್ನೂ ಅರ್ಥವಾಗಿಲ್ಲ. ಸಮಿತಿಯಲ್ಲಿರುವವರು ಸರ್ಕಾರದ ಪ್ರತಿನಿಧಿಗಳು. ಸರ್ಕಾರದ ಧ್ವನಿ’ ಎಂದರು.

‘ನಾಯಕತ್ವ ಬೆಳೆಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಹೀಗಾಗಿ, ಕಾಲೇಜುಗಳಲ್ಲಿ ವಿದ್ಯಾರ್ಥಿ ಮಟ್ಟದ ಚುನಾವಣೆ ಮತ್ತೆ ನಡೆಸುವ ಬಗ್ಗೆ ಚರ್ಚಿಸುತ್ತಿದ್ದೇವೆ’ ಎಂದರು.

‘ಪಂಚಾಯಿತಿ ಮಟ್ಟದಲ್ಲಿ ಸಮಾವೇಶ’:

‘ಗ್ಯಾರಂಟಿ ಸಮಿತಿಯ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಕೊಡಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಆಗ ಮನೆ ಮನೆಗೆ ಹೋಗಿ ಜನರನ್ನು ಸಂಪರ್ಕಿಸುವ ಅಧಿಕಾರ ಸಿಗಲಿದೆ. ಪ್ರತಿ ವಾರ್ಡ್ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸುತ್ತಿದ್ದೇವೆ. ಆ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದ ಡಿ.ಕೆ. ಶಿವಕುಮಾರ್ ‘ನನ್ನ ಹಿಂದೆ ಗಿರಕಿ ಹೊಡೆದರೆ ಪಾಲಿಕೆ ಚುನಾವಣೆ ಟಿಕೆಟ್ ಸಿಗುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದನ್ನು ತಲೆಯಿಂದ ತೆಗೆದುಹಾಕಿ’ ಎಂದರು.

5 ಪಾಲಿಕೆ ರಚಿಸಿ ಶೀಘ್ರ ಚುನಾವಣೆ

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಐದು ಪಾಲಿಕೆ ರಚಿಸಿ ಶೀಘ್ರ ಚುನಾವಣೆ ನಡೆಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

‘ಐದು ಪಾಲಿಕೆಗಳ ರಚನೆಗೆ ಕೆಲವರು ವಿರೋಧ ಮಾಡಬಹುದು. ಆದರೆ, ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ. ಪಾಲಿಕೆಗಳು ರಚನೆಯಾದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಲೇಬೇಕೆಂದು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರಿ ಮಾಡಬೇಕಿದೆ. ಡಿ.ಕೆ.ಶಿವಕುಮಾರ್ ಒಬ್ಬನೇ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಕಾರ್ಯಕರ್ತರೇ ಜೀವಾಳ’ ಎಂದರು.

‘ಸುರಂಗ ರಸ್ತೆ ನಿರ್ಮಾಣ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ’ ಎನ್ನುವ ಸಂಸದ ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುರಂಗ ರಸ್ತೆ ಮಾಡಲಾಗುತ್ತಿದೆ. ಅಲ್ಲೆಲ್ಲ ಯಾವ ಕಾರಣಕ್ಕೆ ಸುರಂಗ ರಸ್ತೆ ಮಾಡಲಾಗುತ್ತಿದೆ. ಇಲ್ಲಿ ಮಾತ್ರ ಯಾಕೆ ವಿರೋಧ. ನಾವು ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ಬಿಜೆಪಿ ಯಾವತ್ತಿಗೂ ಅಭಿವೃದ್ಧಿಯ ವಿರುದ್ಧ ವಾಗಿರುವ ಪಕ್ಷ. ಬೆಂಗಳೂರಿಗೆ ಅವರ ಕೊಡುಗೆ ಶೂನ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.