
ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ ಕಾರ್ಯಕ್ರಮ
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಜಾರಿ ನಿರ್ದೇಶನಾಲಯ, ಸಿಬಿಐ ಕಾಟ ತಾಳಲು ಆಗದೇ ದೇಶದಲ್ಲಿನ 14 ಲಕ್ಷ ಉದ್ಯಮಿಗಳು ವಿದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ–2026’ರಲ್ಲಿ ಮಾತನಾಡಿದ ಅವರು, ‘ನನಗೂ ಹಲವು ಜನ ಹೇಳುತ್ತಾರೆ. ಕಷ್ಟವೋ, ಸುಖನೋ ಎಲ್ಲ ಅನುಭವಿಸಿ ಆಗಿದೆ. ಇಲ್ಲೇ ಇರುತ್ತೇನೆ ಅಂತ ಹೇಳಿರುವೆ. ಹಣ್ಣು ಕೆಂಪಾಗಿ, ಚೆನ್ನಾಗಿದ್ದರೆ ಜನರು ಕಲ್ಲು ಹೊಡೆಯುತ್ತಾರೆ. ಯಾರು ಬಲಿಷ್ಠರಾಗುತ್ತಾರೋ ಅವರಿಗೆ ಶತ್ರುಗಳು ಜಾಸ್ತಿ. ಅಸೂಯೆ ಪಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಊರಿನಲ್ಲಿ ಹುಟ್ಟಿದ ಹೋರಿಗಳೆಲ್ಲ ಬಸವ ಆಗುವುದಿಲ್ಲ. ಎಲ್ಲರೂ ನಾಯಕರಾಗಲು ಆಗುವುದಿಲ್ಲ’ ಎಂದರು.
‘ಯಾವುದೇ ಕೆಲಸ ಇರಲಿ ಆತ್ಮವಿಶ್ವಾಸ ಇಟ್ಟುಕೊಂಡು ಮುನ್ನುಗ್ಗಬೇಕು. ಯಾವತ್ತೂ ತಮ್ಮನ್ನು ತಾವು ನಿಷ್ಪ್ರಯೋಜಕ, ಸಣ್ಣವ ಎಂದು ಭಾವಿಸಬಾರದು. ಶ್ರಮಕ್ಕೆ ಶ್ರಮಕ್ಕೆ ಪ್ರತಿಫಲ ಸಿಗುತ್ತೆ. ಬದ್ಧತೆಗೆ ಯಶಸ್ಸು ಸಿಗುತ್ತದೆ. ದೇವರು ವರ, ಶಾಪ ನೀಡುವುದಿಲ್ಲ. ಅವಕಾಶ ನೀಡುತ್ತಾನೆ. ಆ ಅವಕಾಶ ಸಿಕ್ಕಾಗ ಶ್ರಮವಹಿಸಿ ಯಶಸ್ಸು ಸಾಧಿಸಬೇಕು. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕು. ಆಗ ಗ್ರಾಹಕರು ಬರುತ್ತಾರೆ. ನಂಬಿಕೆ ಮೂಲಕ ಬ್ರ್ಯಾಂಡ್ ಹೆಚ್ಚಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.
‘ಉದ್ಯಮಿಗಳು ಸಾಲ ತಂದು ವ್ಯಾಪಾರ ಮಾಡುತ್ತಾರೆ. ಬಡ್ಡಿ ಕಟ್ಟಿ, ಹಲವಾರು ಉದ್ಯೋಗಿಗಳಿಗೆ ವೇತನ ನೀಡುತ್ತಾರೆ. ಜಿಎಸ್‌ಟಿ ಪಾವತಿಸಿದ ನಂತರ ಉಳಿದರೆ ಲಾಭ. ಸರ್ಕಾರ, ಸಮಾಜಕ್ಕೆ ಸಹಾಯ ಮಾಡುವ ಉದ್ಯಮಿಗಳ ಪರ ಸದಾ ಇರುತ್ತೇನೆ. ಒಕ್ಕಲಿಗರು ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ’ ಎಂದರು.
‘ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಪುಟ್ಟಪರ್ತಿ ಸಾಯಿ ಬಾಬಾ ಅವರು ಬಂದಿದ್ದರು. ಅವರು ಹಣ ಹಾಗೂ ರಕ್ತ ಎರಡೂ ನಿರಂತರ ಚಲನೆಯಲ್ಲಿ ಇರಬೇಕು, ಆಗಲೇ ಒಳ್ಳೆಯದು ಎಂದಿದ್ದರು. ಯಾವುದೇ ಉದ್ಯಮ ಮಾಡಿದರೂ ಸಮಾಜದಲ್ಲಿ ಉತ್ತಮ ಘನತೆ ಹೊಂದಿರಬೇಕು’ ಎಂದು ಹೇಳಿದರು.
ಫಸ್ಟ್ ಸರ್ಕಲ್ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ, ಅಧ್ಯಕ್ಷ ಡಿ. ಮುನಿರಾಜು, ಮಾಜಿ ಸಚಿವ ಬಿ.ಎಲ್.ಶಂಕರ್, ಉದ್ಯಮಿ ಪ್ರಶಾಂತ್ ಪ್ರಕಾಶ್, ಸಮಾಜದ ಮುಖಂಡರಾದ ವಿ.ರಾಮಸ್ವಾಮಿ, ಡಾ.ನಾಗೇಶ್, ಶಿವಕುಮಾರ್, ಬಾಲಕೃಷ್ಣ, ವೆಂಕಟಪ್ಪ, ನೀಲಕಂಠ, ತಿಮ್ಮೇಶ್ ಉಪಸ್ಥಿತರಿದ್ದರು.
ಒಕ್ಕಲಿಗರು ಮಕ್ಕಳ ಹೆಸರಿನ ಮುಂದೆ ‘ಗೌಡ’ ಪದವನ್ನು ಕಡ್ಡಾಯವಾಗಿ ಸೇರಿಸಿಬೇಕು. ಆಗ ಮಾತ್ರ ಸಮಾಜ ಅವರನ್ನು ಸುಲಭವಾಗಿ ಗುರುತಿಸುತ್ತದೆ ಎಂದು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದರು. ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾದರೆ ಹತ್ತಾರು ಜನರಿಗೆ ಉದ್ಯೋಗ ನೀಡಬಹುದು. ಸಾಧನೆ ಮಾಡಲು ಇನ್ನೊಬ್ಬರನ್ನು ತುಳಿಯಬಾರದು. ಜತೆಗೆ ಕರೆದುಕೊಂಡು ಬೆಳೆಯಬೇಕು. ಒಕ್ಕಲು ಮಾಡಿದರೆ ಗ್ರಾಮೀಣ ಜನರು ಗುರುತಿಸುತ್ತಾರೆ. ಉದ್ಯಮಿಯಾದರೆ ನಗರದಲ್ಲೂ ಪರಿಚಿತರಾಗುತ್ತಾರೆ ಎಂದರು.
‘ಒಂದು ಸಮುದಾಯ ಸ್ಪರ್ಧೆಗೆ ಬಿದ್ದವರಂತೆ ಮಕ್ಕಳು ಮಾಡಿಕೊಳ್ಳುತ್ತಾರೆ. ಒಕ್ಕಲಿಗರು ಒಂದು ಮಗುವನ್ನೂ ಸಾಕಲು ಕಷ್ಟ ಎಂದು ಕೊರಗುತ್ತಿದ್ದಾರೆ. ಇಂತಹ ಮನೋಭಾವ ಬದಲಾಗಬೇಕು. ಹೆಚ್ಚು ಮಕ್ಕಳನ್ನು ಪ್ರತಿ ಕುಟುಂಬಗಳೂ ಹೊಂದಬೇಕು’ ಎಂದು ಚಿಕ್ಕಮಗಳೂರಿನ ವೈದ್ಯ ಜೆ.ಪಿ.ಕೃಷ್ಣೇಗೌಡ ಹೇಳಿದರು. ಒಕ್ಕಲಿಗರು ಕಾಫಿ ಉದ್ಯಮಕ್ಕೆ ಹೆಸರಾಗಿದ್ದಾರೆ. ಸಿದ್ದಾರ್ಥ ಹೆಗ್ಡೆ ಕಾಫಿ ಸಾಮ್ರಾಜ್ಯವನ್ನೇ ಕಟ್ಟಿದ್ದ ದೊರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಅವರ ರೀತಿ ಇತರರೂ ಸಮಾಜದ ಜನರ ಏಳಿಗೆಗೆ ಕೈಜೋಡಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.