ADVERTISEMENT

ಪಕ್ಷದ ಕಾರ್ಯಕರ್ತನಾಗಿ ಉಳಿಯಲು ಬಯಸುವೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 16:39 IST
Last Updated 24 ಡಿಸೆಂಬರ್ 2025, 16:39 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ನವದೆಹಲಿ: ‘ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ. ನನಗೆ ಅದೇ ಶಾಶ್ವತ. 1980ರಿಂದ ನಾನು ಪಕ್ಷದ ಕಾರ್ಯಕರ್ತನಾಗಿದ್ದು, 45 ವರ್ಷಗಳಿಂದ ಇಲ್ಲಿಯವರೆಗೂ ಪಕ್ಷಕ್ಕಾಗಿ ದುಡಿಯುತ್ತಿರುವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ‘ನೀವು ಐದು ವರ್ಷ ಉಪಮುಖ್ಯಮಂತ್ರಿಯಾಗಿರಲು ಬಯಸುತ್ತೀರಾ’ ಎಂದು ಕೇಳಿದಾಗ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

‘ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದ ನಡೆದಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ನಡುವೆ ಏನೆಲ್ಲಾ ಚರ್ಚೆಯಾಗಿತ್ತು ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಸೇರಿ ಕೆಲಸ ಮಾಡಿ, ಸರ್ಕಾರ ರಚಿಸಿದ್ದೇವೆ. ಪ್ರತಿ ಕಾರ್ಯಕರ್ತ ಪಕ್ಷಕ್ಕಾಗಿ ಬೆವರು ಹರಿಸಿ ದುಡಿದಿದ್ದಾನೆ. ನಮಗೆ ಸ್ಪಷ್ಟ ಬಹುಮತ ನೀಡಿದ ರಾಜ್ಯದ ಜನರಿಗೆ ನಾವು ಚಿರಋಣಿಯಾಗಿರುತ್ತೇವೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದು, ಇದನ್ನು ಮುಂದುವರಿಸುತ್ತೇವೆ. ಹೈಕಮಾಂಡ್ ಕೂಡ ನಮಗೆ ಸ್ವಾತಂತ್ರ್ಯ ನೀಡಿದ್ದು, ನಮ್ಮ ಸರ್ಕಾರ ಒಂದು ತಂಡವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾತ್ರವಲ್ಲ, ಎಲ್ಲ ಶಾಸಕರು, ಕಾರ್ಯಕರ್ತರು ತ್ಯಾಗ ಮಾಡಿ ಅಧಿಕಾರಕ್ಕೆ ತಂದಿದ್ದಾರೆ’ ಎಂದರು.

ಉಪಾಹಾರಕೂಟದ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾವು, ಸಿಎಂ, ಸಚಿವರು, ಜನರು, ಉದ್ಯಮಿಗಳು, ಅಧಿಕಾರಿಗಳು ಆಗಾಗ್ಗೆ ಭೇಟಿ ಮಾಡುತ್ತಲೇ ಇರುತ್ತೇವೆ. ಇದರಲ್ಲಿ ಯಾವುದೇ ವಿಶೇಷವಿಲ್ಲ’ ಎಂದರು.

ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, ‘ಈ ಬಾರಿಯ ಪ್ರವಾಸದಲ್ಲಿ ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿಲ್ಲ. ರಾಹುಲ್ ಗಾಂಧಿ ಅವರು ನಿನ್ನೆಯಷ್ಟೇ ವಿದೇಶದಿಂದ ಮರಳಿದ್ದಾರೆ. ಅವರಿಗೆ ತೊಂದರೆ ಕೊಡಲು ಬಯಸುವುದಿಲ್ಲ’ ಎಂದು ತಿಳಿಸಿದರು.

‍ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿಯಾಗಬೇಕು ಎಂದು ಕೆಲವು ಮುಖಂಡರು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಈ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಸುತ್ತಿದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನವನ್ನು ಎಲ್ಲರೂ ಪಾಲಿಸುತ್ತೇವೆ. ಪಕ್ಷದಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿರಬೇಕು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿ ಇಡೀ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂಬುದು ಪ್ರಿಯಾಂಕಾ ಗಾಂಧಿ ಅವರ ಗುರಿಯಾಗಿದೆ. ಅದಕ್ಕೆ ಅವರು ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.