ADVERTISEMENT

ಡಿ.ಕೆ. ಶಿವಕುಮಾರ್ ಆಸ್ತಿ ಘೋಷಣೆ ಮಾಡಲಿ: ಸಚಿವ ಜೋಶಿ ಸವಾಲು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 9:34 IST
Last Updated 27 ಜನವರಿ 2023, 9:34 IST
   

ಹುಬ್ಬಳ್ಳಿ: 'ರಾಜಕೀಯಕ್ಕೆ ಬರುವ ಪೂರ್ವ ತಮ್ಮ ಆಸ್ತಿ ಎಷ್ಟಿತ್ತು, ಈಗ ಎಷ್ಟಾಗಿದೆ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಲಿ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.

'ಮತದಾರರಿಗೆ ಹಣದ ಆಮಿಷ ತೋರಿಸುತ್ತಿರುವ ಬಿಜೆಪಿಯನ್ನು ಬ್ಯಾನ್ ಮಾಡಿ' ಎನ್ನುವ ಡಿ.ಕೆ.‌ ಶಿವಕುಮಾರ್ ಹೇಳಿಕೆಗೆ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, 'ಭ್ರಷ್ಟಾಚಾರದ ಬೀಜ ಬಿತ್ತಿ, ತತ್ತಿಯನ್ನಿಟ್ಟು ಕಾವನ್ನು ಕೊಟ್ಟವರು ಕಾಂಗ್ರೆಸ್ ಮುಖಂಡರು. ಅವರಿಂದಲೇ ಭ್ರಷ್ಟಾಚಾರ ಆರಂಭವಾಗಿದ್ದು' ಎಂದು ತಿರುಗೇಟು ನೀಡಿದರು.

'ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಗರಣಗಳ‌ ಸರಮಾಲೆಯೇ ನಡೆಯುತ್ತಿತ್ತು. ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಸಹ ಹಗರಣದಲ್ಲಿ ಭಾಗಿಯಾಗಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಬಿಜೆಪಿಯನ್ನು ಜನರು ಮೆಚ್ಚಿದ್ದಾರೆ. ಅದನ್ನು ಸಹಿಸದ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಡ್ರಾಮಾ ಬಾಜಿ ಕಂಪನಿ ಅದಾಗಿದ್ದು, ಅವರನ್ನು ಜನ ಈಗಾಗಲೇ ಬ್ಯಾನ್ ಮಾಡಿದ್ದಾರೆ' ಎಂದರು.

ADVERTISEMENT

'ಮೋದಿ, ಶಾ ನೂರು ಬಾರಿ ರಾಜ್ಯಕ್ಕೆ ಬಂದರೂ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್' ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ, 'ಹಿಂದಿನ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲೂ ಅವರು ಹಾಗೆ ಹೇಳಿದ್ದರು. ನಂತರ ಆಗಿದ್ದೇನು? ಚುನಾವಣೆ ಸಮೀಪಿಸುತ್ತಿರುವ ಕಾರಣ, ಏನಾದರೂ ಹೇಳಿ‌ಕೆ ನೀಡಿ ಪ್ರಚಾರದಲ್ಲಿರಬೇಕು ಎಂದು ಅವರು ಹಾಗೆಲ್ಲ ಹೇಳಿಕೆ ನೀಡುತ್ತಾರೆ' ಎಂದು ಜೋಶಿ ವ್ಯಂಗ್ಯವಾಡಿದರು.

'ಜ. 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಿಗ್ಗೆ ಬಿವಿಬಿ ಕಾಲೇಜಿನಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಧಾರವಾಡದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಇದು ಮೊದಲ ವಿಶ್ವವಿದ್ಯಾಲಯವಾಗಿದ್ದು, ಈ ಭಾಗಕ್ಕೆ ಐತಿಹಾಸಿಕ ಮೈಲಿಗಲ್ಲಾಗಿದೆ. ಅಲ್ಲಿಂದ ಕುಂದಗೋಳಕ್ಕೆ ತೆರಳಿ, ವಿಜಯ ಸಂಕಲ್ಪಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಬೆಳಗಾವಿಯಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ, ದೆಹಲಿಗೆ ಮರಳಲಿದ್ದಾರೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.