ADVERTISEMENT

ಪಠ್ಯ ಪುಸ್ತಕ ಪರಿಷ್ಕೃರಣೆ ವಿಚಾರದಲ್ಲಿ ಸಾಂಸ್ಕೃತಿಕ ಅತ್ಯಾಚಾರ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 7:30 IST
Last Updated 7 ಜೂನ್ 2022, 7:30 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಪಠ್ಯ ಪುಸ್ತಕ ಪರಿಷ್ಕೃರಣೆ ವಿಚಾರದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪಠ್ಯ ಪುಸ್ತಕ ಗೊಂದಲ ಖಂಡಿಸಿ ಗುರುವಾರ (ಜೂನ್ 9) ಬೆಳಿಗ್ಗೆ 10ಗಂಟೆಗೆ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.

‘ಪಠ್ಯಪುಸ್ತಕ ಬಿಜೆಪಿಯ ಮುಖ, ಮನಸ್ಥಿತಿ. ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಹಾಕಬೇಕು. ಹಳೇ ಪಠ್ಯದಲ್ಲೇ ಶಿಕ್ಷಣ ಮುಂದುವರಿಯಬೇಕು’ ಎಂದು ಅವರು ಆಗ್ರಹಿಸಿದರು.

‘ಅನೇಕ ಸ್ವಾಮೀಜಿಗಳು ಪಠ್ಯ ಪುಸ್ತಕ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮ ಗುರುಗಳು ಮಾಡುತ್ತಿದ್ದಾರೆ’ ಎಂದರು.

‘ಅಂಬೇಡ್ಕರ್ ಸಂವಿಧಾನ ಶಿಲ್ಪಿ, ಅವರ ತಂದೆ, ಹುಟ್ಟಿದ ಊರು ಎಲ್ಲವನ್ನು ಪಠ್ಯ ಪುಸ್ತಕದಿಂದ ತೆಗೆಯಲಾಗಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾತ್ತೇವೆ. ಇದು ಭಾರತದ ಪುಣ್ಯ ಭೂಮಿಗೆ ಮಾಡಿದ ಅಪಮಾನ. ಅಂಬೇಡ್ಕರ್ ಈ ದೇಶದ ಆಸ್ತಿ.‌ಬಸವಣ್ಣನವರ ವಿಚಾರಗಳನ್ನುತಿರುಚಲು ಸಾಧ್ಯವೇ? ಬಸವಣ್ಣನವರ ವಿಚಾರ ಗಮನ ಹರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಾಗ್ಪುರ ಎಜುಕೇಷನ್ ಪಾಲಿಸಿ, ಏನು ಬೇಕಾದರೂ ಮಾಡಿಕೊಳ್ಳಿ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ಬಸವಣ್ಣನವರ ವಿಚಾರದಲ್ಲಿ ಅನೇಕ ಮಹತ್ವದ ಅಂಶಗಳನ್ನು ತೆಗೆದು, ತಿರುಚಿ ಅಭಿಪ್ರಾಯ ಬರುವಂತೆ ಮಾಡಲಾಗಿದೆ. ಕುವೆಂಪುರವರ ಗೀತೆಯನ್ನು ಪ್ರತಿ ಕಾರ್ಯಕ್ರಮದಲ್ಲಿ ಹಾಡಲಾಗುತ್ತಿದೆ. ಆದರೆ, ಬಿಜೆಪಿಯವರ ಮನಸ್ಥಿತಿ ಸರಿ ಇಲ್ಲ. ನಾರಾಯಣ ಗುರು ಸ್ತಬ್ಧಚಿತ್ರ ‌ತೆಗೆದಾಗ ಯಾರೂ ಮಾತಾಡಲಿಲ್ಲ’ ಎಂದರು.

ಪಕ್ಷಾತೀತವಾಗಿ ಹೋರಾಟಕ್ಕೆ ರೈತರು ಸಜ್ಜಾಗಬೇಕು:‌

ರಸಗೊಬ್ಬರ, ಬಿತ್ತನೆ ಬೀಜದ ಹೆಸರಿನಲ್ಲಿ ಸರ್ಕಾರದೊಡ್ಡ ಗೋಲ್ ಮಾಲ್ ನಡೆಸುತ್ತಿದೆ. ಸರ್ಕಾರ ಬ್ಲ್ಯಾಕ್ ಮಾರ್ಕೆಟ್ ಮಾಡಿಸುತ್ತಿದೆ. ನವಲಗುಂದದಲ್ಲಿ 23 ಜನ ರೈತರಿಗೆ ಮಾತ್ರ ಗೊಬ್ಬರ ಕೊಟ್ಟಿದ್ದಾರೆ. ರೈತ ಹೋರಾಟಗಾರರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಪಕ್ಷಾತೀತವಾಗಿ ಹೋರಾಟಕ್ಕೆ ರೈತರು ಸಜ್ಜಾಗಬೇಕು ಎಂದು ಶಿವಕುಮಾರ್ ಕರೆ ನೀಡಿದರು.

‘ನಮ್ಮಂಥವರನ್ನ ಜೈಲಿಗೆ ಕಳುಹಿಸಲು ಸರ್ಕಾರ ಸಜ್ಜಾಗಿದೆ. ಎಲ್ಲಾ ಸಂದರ್ಭದಲ್ಲೂ ಕಮೀಷನ್ ಆಯ್ತು. ಈಗ ರೈತರ ವಿಚಾರದಲ್ಲೂಕಮಿಷನ್' ಎಂದೂ ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.