ADVERTISEMENT

ಕಾಲೇಜಿಗಾಗಿ ಡಿಕೆಶಿ, ಸುಧಾಕರ್‌ ಜಟಾಪಟಿ

ಚಿಕ್ಕಬಳ್ಳಾಪುರದಲ್ಲಿ ವೈದ್ಯ ಕಾಲೇಜು ಸ್ಥಾಪನೆಗೆ ಸರ್ಕಾರ ಅನುಮತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 18:47 IST
Last Updated 29 ಅಕ್ಟೋಬರ್ 2019, 18:47 IST
   

ಬೆಂಗಳೂರು/ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಮತ್ತು ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಮಧ್ಯೆ ಜಟಾಪಟಿ ಆರಂಭವಾಗಿದೆ.

‘ಈ ವೈದ್ಯಕೀಯ ಕಾಲೇಜು ಕನಕಪುರಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಮಂಜೂರಾಗಿತ್ತು. ಅದನ್ನು ಕಸಿದುಕೊಂಡು ಚಿಕ್ಕಬಳ್ಳಾಪುರಕ್ಕೆ ನೀಡಲಾಗಿದೆ. ವಿಧಾನಸೌಧದಲ್ಲಿ ಪ್ರಾಣ ಹೋದರೂ ಸರಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ತಂದೇ ತರು
ತ್ತೇನೆ’ ಎಂದು ಡಿಕೆಶಿ ಪಣ ತೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್‌, ರಾಮನಗರಕ್ಕೆ ಈಗಾಗಲೇ ಆರೋಗ್ಯ ವಿಶ್ವವಿದ್ಯಾಲಯ ಮಂಜೂರಾಗಿದೆ. ಶಿವಕುಮಾರ್ ಅದೇ ಜಿಲ್ಲೆಯ ಕನಕಪುರ ತಾಲ್ಲೂಕಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿಕೊಳ್ಳುವ ಔಚಿತ್ಯ ಏನಿತ್ತು? ಹೊಸ ಸರ್ಕಾರ ಬಂದ ಮೇಲೆ ಈ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೆ. ಕನಕಪುರ ಕಾಲೇಜು ರದ್ದು ಮಾಡಿ ಎಂದು ಹೇಳಿಲ್ಲ’ ಎಂದಿದ್ದಾರೆ.

ADVERTISEMENT

ಡಿ.ಕೆ ಹೇಳಿದ್ದೇನು: ‘ನಾನು ವೈದ್ಯಕೀಯ ಶಿಕ್ಷಣ ಇಲಾಖೆ ಆಯ್ಕೆ ಮಾಡಿಕೊಂಡಿದ್ದೇ ನನ್ನ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತರುವ ಉದ್ದೇಶದಿಂದ. ಬಜೆಟ್‌ನಲ್ಲಿ ಮಂಜೂರು ಮಾಡಿಸಿಕೊಂಡಿದ್ದೆ. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಇದನ್ನು ಪ್ರಶ್ನೆ ಮಾಡಿರಲಿಲ್ಲ. ಸಚಿವ ಸಂಪುಟದಲ್ಲೂ ಅನುಮತಿ ಪಡೆಯಲಾಗಿತ್ತು. ಇದು ನನ್ನ ಕನಸಿನ ಯೋಜನೆ. ಹೊಸ ಸರ್ಕಾರ ಕಾಲೇಜನ್ನು ಏಕಾಏಕಿ ರದ್ದು ಮಾಡಿ, ಚಿಕ್ಕಬಳ್ಳಾಪುರಕ್ಕೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಈ ವಿಚಾರವನ್ನು ಹೇಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ನನಗೆ ರಾಜಕೀಯ ಮಾಡುವುದೂ ಗೊತ್ತು, ಹೋರಾಟ ಮಾಡುವುದೂ ಗೊತ್ತು. ನಾನೇ ಒಂದು ಮೆಡಿಕಲ್ ಕಾಲೇಜು ಆರಂಭಿಸಬಹುದು. ಆದರೆ ನನ್ನ ಕ್ಷೇತ್ರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸಿಗಬೇಕು. ಕಾಲೇಜಿಗಾಗಿ ಅಧಿಕಾರ ತ್ಯಾಗ ಮಾಡಲು ಸಿದ್ಧ’ ಎಂದರು.

ನೇಣು ಹಾಕೋದು ಡಿಕೆಶಿ ಸಂಸ್ಕಾರ: ‘ನೇಣು ಹಾಕೋದು, ಹಾಕಿಕೊಳ್ಳುವುದು, ಹಾಕಿಸೋದು, ಏಕವಚನದಲ್ಲಿ ಮಾತನಾಡುವುದು ಡಿ.ಕೆ.ಶಿವಕುಮಾರ್ ಅವರು ಕಲಿತ ಸಂಸ್ಕಾರ. ನನ್ನ ವಿಚಾರವಾಗಿ ಏಕವಚನದಲ್ಲಿ ಮಾತನಾಡಲು ಅವರೇನು ನನ್ನ ಹಿರಿಯ ಅಣ್ಣನಾ?’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.

‘ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ 2016–17ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿತ್ತು. ಅದಕ್ಕೆ ಮೊದಲು ಅನುದಾನ ನೀಡಬೇಕಾದದ್ದು ಸಮ್ಮಿಶ್ರ ಸರ್ಕಾರದ ಧರ್ಮವಾಗಿತ್ತು. ಆದರೆ ಧರ್ಮ ಪಾಲನೆ ಆಗಿಲ್ಲ. ಆದ್ದರಿಂದ, ಮಲತಾಯಿ ಧೋರಣೆ, ಅನ್ಯಾಯದಿಂದ ಬೇಸತ್ತು ರಾಜೀನಾಮೆ ನೀಡಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.