ಬೆಂಗಳೂರು: ‘ನನಗೆ ಯಾರು ಎಷ್ಟೇ ತೊಂದರೆ ಕೊಡಲಿ, ಆಮಿಷ ಒಡ್ಡಲಿ, ಕೇಸ್ ಹಾಕಲಿ, ಜೈಲಿಗೆ ಹಾಕಲಿ. ಯಾವುದಕ್ಕೂ ನಾನು ಬೆದರುವುದಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಅದಕ್ಕಾಗಿ ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಗುರುವಾರ ಪದಗ್ರಹಣ ಮಾಡಿದ ಬಳಿಕ ಮಾತನಾಡಿದ ಅವರು, ‘ಈ ಶಿವಕುಮಾರ್ ಬೆದರಿಕೆಗೆ ಜಗ್ಗುವ ಮಗ ಅಲ್ಲ. ಕೆಲವರು ನನ್ನನ್ನು ಕನಕಪುರ ಬಂಡೆ ಅಂತಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನಾನು ಕೇವಲ ಶಿಲೆಯಾಗಲು ಬಯಸುವುದಿಲ್ಲ. ವಿಧಾನಸೌಧದ ಮೆಟ್ಟಿಲ ಚಪ್ಪಡಿ ಕಲ್ಲಾಗುತ್ತೇನೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು
ಪ್ರಯತ್ನಿಸುತ್ತೇನೆ’ ಎಂದರು.
‘ನಾನು ಯಾರಿಗೂ ದ್ರೋಹ ಬಗೆದಿಲ್ಲ. ಹಲವು ತೊಂದರೆ ಅನುಭವಿಸಿದ್ದೇನೆ. ಅದೆಲ್ಲವೂ ಪಕ್ಷಕ್ಕಾಗಿ. ಯಾರಿಗಾದರೂ ಅನ್ಯಾಯ ಮಾಡಿದ್ದರೆ ಶಿಕ್ಷೆ ಸ್ವೀಕರಿಸಲು ಸಿದ್ಧ’ ಎಂದು ಭಾವುಕರಾಗಿ ನುಡಿದರು.
‘ಸೋನಿಯಾ ಗಾಂಧಿ ಅವರು ಯಾವ ಸಂದರ್ಭದಲ್ಲಿ ನನಗೆ ಈ ಶಕ್ತಿ ಕೊಟ್ಟರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ನಾನು ವೈಯಕ್ತಿಕ ನಾಯಕತ್ವಕ್ಕಿಂತ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವನು. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಂಬಿರುವವನು’ ಎಂದು ಪ್ರತಿಪಾದಿಸಿದರು.
‘ಆಪರೇಷನ್ ಕಮಲದ ಮೂಲಕ ಹೋದವರು, ಹೋಗುವವರು ಹೋಗಲಿ, ಸಂತೋಷದಿಂದ ಕಳುಹಿಸುತ್ತೇವೆ. ಕಾರ್ಯಕರ್ತರು ಹಾಗೂ ನಾಯಕರಿಗೆ ಪಕ್ಷ ಕಟ್ಟುವ ಶಕ್ತಿ ಇದೆ’ ಎಂದರು.
ಕೊರೊನಾ ಸೋಂಕಿನ ಕಾರಣಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ರಾಜ್ಯದೆಲ್ಲೆಡೆ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮ ನೋಡುವ ವ್ಯವಸ್ಥೆ ಮಾಡಲಾಯಿತು.
*
ಕರ್ನಾಟಕ ಸೇರಿದಂತೆ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮೂಲಕ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕಿದೆ.
-ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.