
ನವದೆಹಲಿ: ‘ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರನ್ನು ಹುದ್ದೆಯಿಂದ ಕಿತ್ತು ಹಾಕಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮತಕಳವಿನ ವಿರುದ್ಧ ರಾಜ್ಯದಲ್ಲಿ ಅಭಿಯಾನ ನಡೆಸುತ್ತಿದ್ದೇವೆ. ಇದೇ 9ರಂದು ಜಿಲ್ಲಾ ಘಟಕದ ಅಧ್ಯಕ್ಷರ ಜತೆಗೆ ದೆಹಲಿಗೆ ಬಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸುತ್ತೇವೆ’ ಎಂದರು.
‘ಈ ಅಭಿಯಾನದಲ್ಲಿ ಯಾರು ಕೆಲಸ ಮಾಡಿಲ್ಲವೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸಹಿಸಂಗ್ರಹ ಅಭಿಯಾನದಲ್ಲಿ ಸರಿಯಾಗಿ ಜವಾಬ್ದಾರಿ ನಿಭಾಯಿಸದವರನ್ನು ಅವರ ಹುದ್ದೆಯಿಂದ ಕಿತ್ತೊಗೆಯುತ್ತೇವೆ’ ಎಂದರು.
‘ಮತಗಳ್ಳತನ ಗಂಭೀರ ವಿಚಾರವಾಗಿದ್ದು, ನಮ್ಮ ರಾಜ್ಯದಲ್ಲಿ ಈಗಾಗಲೇ 80 ಲಕ್ಷ ಸಹಿ ಸಂಗ್ರಹ ಮಾಡಲಾಗಿದೆ. ಕೆಲವು ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಿಲ್ಲ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಬ್ಲಾಕ್ ಅಧ್ಯಕ್ಷರನ್ನು ವಜಾಗೊಳಿಸಲು ನನಗೆ ಅಧಿಕಾರವಿದೆ. ಶಾಸಕರ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. ಕ್ರಮಕ್ಕೆ ಎಐಸಿಸಿ ನಾಯಕರು ಸೂಚನೆ ನೀಡುತ್ತಾರೆ’ ಎಂದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರು. ನಾವು ಈ ವಿಚಾರವನ್ನು ಜನರಿಗೆ ತಿಳಿಸುತ್ತಿದ್ದು, ಅವರು ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡಲಿದ್ದಾರೆ. ದೇಶದಲ್ಲಿ ಏನಾಗುತ್ತಿದೆ ಎಂದು ಜನರಿಗೆ ಮನದಟ್ಟು ಮಾಡುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನಾಗಿದೆ ಎಂದು ನಮಗೆ ಗೊತ್ತಿದೆ. ನಾವು ಅಲ್ಲಿ ಸೋತಾಗಿದೆ. ಈಗ ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಬೇಡ. ಈಗ ಬೇರೆ ಕ್ಷೇತ್ರಗಳಲ್ಲಿನ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಅವರೇ ಸಾಕ್ಷ್ಯ ಸಮೇತ ಜನರ ಮುಂದೆ ಇಡುತ್ತಿದ್ದಾರೆ’ಎಂದು ತಿಳಿಸಿದರು.
‘ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು’ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆರ್‌ಎಸ್‌ಎಸ್ ಅನ್ನು ನಿಯಂತ್ರಿಸುತ್ತೇವೆ ಎಂದು ನಾವು ಎಲ್ಲಿ ಹೇಳಿದ್ದೇವೆ? ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂದು ಹೇಳಿದ್ದೇವೆ. ಇದು ಎಲ್ಲರಿಗೂ ಅನ್ವಯವಾಗಲಿದೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿತ್ತು. ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಆದೇಶದ ಪ್ರಕಾರ ನಮ್ಮ ಸರ್ಕಾರ ಈಗ ಕ್ರಮ ಕೈಗೊಂಡಿದೆ. ಆರ್‌ಎಸ್‌ಎಸ್‌ನವರು ಕಾರ್ಯಕ್ರಮ ಮಾಡಬಾರದು ಎಂದು ನಾವು ಎಲ್ಲಿ ಹೇಳಿದ್ದೇವೆ?’ ಎಂದರು.
‘ಪ್ರಸ್ತಾವಿತ ಮೇಕೆದಾಟು ಯೋಜನೆಯ ಪ್ರಕರಣದ ವಿಚಾರಣೆಗೆ ಪ್ರತ್ಯೇಕ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಾಲಯವು ಇದಕ್ಕೆ ದಿನಾಂಕ ನಿಗದಿ ಮಾಡಲಿದ್ದು, ರಾಜ್ಯಕ್ಕೆ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.