
ಬಿ.ಶ್ರೀರಾಮುಲು
ಕೂಡ್ಲಿಗಿ (ವಿಜಯನಗರ): ಬೆಳಗಾವಿ ಅಧಿವೇಶನದ ಹೊತ್ತಿಗೆ ಹೊಸ ಮುಖ್ಯಮಂತ್ರಿ ಬರಲಿದ್ದು, ನವೆಂಬರ್ ಕ್ರಾಂತಿಯಲ್ಲಿ ಡಿ.ಕೆ.ಶಿವಕುಮಾರ್ ಅವರಂತೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.
ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದೊಂದಿಗೆ ಉಪ ಮುಖ್ಯಮಂತ್ರಿಯಾಗಿದ್ದು, ನಾಲ್ಕೈದು ಖಾತೆಗಳೊಂದಿಗೆ ಬೆಂಗಳೂರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಅವರಿಗೆ ಬಹಳ ಜವಾಬ್ದಾರಿಗಳಿದ್ದು, ಅವುಗಳನ್ನೇ ಮುಂದುವರಿಸಿಕೊಂಡು ಹೋಗಲಿದ್ದಾರೆ. ಅವರು 2028ರ ತನಕ ಮುಖ್ಯಮಂತ್ರಿ ಆಗುವುದಿಲ್ಲ. ಮೂರನೇ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದು, ಯಾರು ಎಂಬ ಪ್ರಶ್ನೆ ಮಾತ್ರ ಇದೆ ಎಂದರು.
‘ನಿಮ್ಮ ಸಮುದಾಯಕ್ಕೆ ಬೆಂಬಲ ನೀಡುತ್ತೀರಾ?’ ಎಂಬ ಪ್ರಶ್ನೆಗೆ, ‘ಸತೀಶ್ ಜಾರಕಿಹೊಳಿ ಅವರು ಹಿಂದಿನಿಂದಲೂ ಅಹಿಂದ ನಾಯಕರಾಗಿದ್ದು, ಸತೀಶ್ ಅವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರ ಪುತ್ರ ಹೇಳಿದ್ದಾರೆ. ಸತೀಶ್ ಮುಖ್ಯಮಂತ್ರಿಯಾದರೆ ನಾವು ಕೂಡ ಸಂತೋಷಪಡುತ್ತೇವೆ. ಏಕೆಂದರೆ ಅವರು ನಮ್ಮ ಉತ್ತರ ಕರ್ನಾಟಕದವರಾಗಿದ್ದು, ಅವರಿಂದ ಇಲ್ಲಿಗೆ ಅನುಕೂಲವಾಗಲಿದೆ. ನವೆಂವರ್ ಕ್ರಾಂತಿಯಿಂದ ಸರ್ಕಾರ ಬಿದ್ದರೆ ಮಧ್ಯಂತರ ಚುನಾವಣೆಗೆ ನಾವು ಸಿದ್ದವಾಗಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.