ADVERTISEMENT

ಡಿ.ಕೆ.ಶಿ ‘ಮೀರ್‌ಸಾಧಿಕ್’: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 10:41 IST
Last Updated 20 ಅಕ್ಟೋಬರ್ 2020, 10:41 IST
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ   

ಬೆಂಗಳೂರು: ‘ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ‘ಮೀರ್‌ ಸಾಧಿಕ್‌’ನಂತೆ ಕೆಲಸ ಮಾಡಿದವರು ಡಿ.ಕೆ.ಶಿವಕುಮಾರ್‌. ಇವರ ಜತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಎಚ್‌.ಡಿ.ಕುಮಾರಸ್ವಾಮಿಗೆ ನಂಬಿಕೆ ದ್ರೋಹ ಮಾಡಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ದೂರಿದ್ದಾರೆ.

ಆರ್‌.ಆರ್‌.ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಸೇರಿ ನಡೆಸಿರುವ ಷಡ್ಯಂತ್ರವೂ ಈಗ ಬಯಲಿಗೆ ಬಂದಿದೆ. ಅದಕ್ಕೆ ಸಂಬಂಧಿಸಿದ ಅವರಿಬ್ಬರ ನಡುವಿನ ಮಾತುಕತೆಯ ಆಡಿಯೋ ದಾಖಲೆ ಇದ್ದು, ಅದನ್ನು ಸಕಾಲದಲ್ಲಿ ಬಿಡುಗಡೆಗೊಳಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮುನಿರತ್ನ ಸೇರಿದಂತೆ ಹಲವು ಕಾಂಗ್ರೆಸ್‌ ಶಾಸಕರು ಪಕ್ಷ ಬಿಟ್ಟು ಹೋಗುವಂತೆ ಪುಸಲಾಯಿಸಿದ್ದು ಯಾರು? ಮೈತ್ರಿ ಸರ್ಕಾರದಲ್ಲಿ ಬಂಡೆಯಂತೆ ಇದ್ದು ಸರ್ಕಾರವನ್ನು ರಕ್ಷಿಸುತ್ತೇನೆ, ಪತನಗೊಳಿಸಲು ಬಿಡುವುದಿಲ್ಲ, ನಾವು ಜೋಡೆತ್ತುಗಳು ಎಂದು ಹೇಳುತ್ತಲೇ ಮೀರ್‌ ಸಾಧಿಕ್‌ ಆಗಿದ್ದು ನೀವಲ್ಲವೆ’ ಎಂದು ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಪ್ರಶ್ನಿಸಿದರು.

ADVERTISEMENT

ಕಾಂಗ್ರೆಸ್‌ ಶಾಸಕರು ಪಕ್ಷ ಬಿಡಲು ಕಾರಣರು ಯಾರು ಎಂಬುದನ್ನು ತಿಳಿಸುವ ಧೈರ್ಯಈಗಲಾದರೂ ಶಿವಕುಮಾರ್‌ ಮಾಡಬೇಕು. ಈ ಷಡ್ಯಂತ್ರ ರೂಪಿಸಿದ್ದು ಯಾರು ಎಂಬುದನ್ನು ವಿವರಿಸಲಿ. ಆರ್‌.ಆರ್‌.ನಗರ ಚುನಾವಣೆಯಲ್ಲಿ ಸೋಲಿನ ಸುಳಿವು ಸಿಗುತ್ತಿದ್ದಂತೆ ಮುನಿರತ್ನ ಹಣ ತೆಗೆದುಕೊಂಡು ಬಿಜೆಪಿ ಸೇರಿದರು ಎಂಬುದಾಗಿ ಆರೋಪ ಮಾಡುತ್ತಿದ್ದಾರೆ. ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಹೊಸ ನಾಟಕ ಆಡುತ್ತಿದ್ದಾರೆ ಎಂದರು.

‘ಸಮ್ಮಿಶ್ರ ಸರ್ಕಾರ ಪತನವಾಗಲು ಮತ್ತು ಕಾಂಗ್ರೆಸ್‌ ಶಾಸಕರು ಪಕ್ಷ ಬಿಟ್ಟು ಹೋಗಲು ಕಾರಣರು ಯಾರು ಎಂಬುದನ್ನು ಡಿ.ಕೆ.ಶಿವಕುಮಾರ್‌ ಅವರು ತಾವು ನಂಬುವ ದೇವರ ಮುಂದೆ ಪ್ರಮಾಣ ಮಾಡಲಿ. ಎಂದೂ ಅಶ್ವತ್ಥನಾರಾಯಣ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.