ADVERTISEMENT

ಸಿಎಲ್‌ಪಿ ಸಭೆ: ಎಂ.ಬಿ ಪಾಟೀಲ್‌ಗೆ ಎಚ್ಚರಿಕೆ ನೀಡಿದ ಡಿ.ಕೆ ಸುರೇಶ್‌!

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:19 IST
Last Updated 24 ಮೇ 2023, 7:19 IST
   

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದ ಪ್ರವೇಶದ್ವಾರದ ಬಳಿ ಸಂಸದ ಡಿ.ಕೆ. ಸುರೇಶ್ ಮತ್ತು ಸಚಿವ ಎಂ.ಬಿ. ಪಾಟೀಲ ಮುಖಾಮುಖಿಯಾಗಿದ್ದು, ಈ ವೇಳೆ ಸುರೇಶ್​ ಅವರು ಪಾಟೀಲ್ ಅವರನ್ನು ಗುರಾಯಿಸಿ, ಸ್ವಲ್ಪ ಬಿಗಿಯಾಗಿರಲಿ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

ಬುಧವಾರ ಬೆಳಿಗ್ಗೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಇಬ್ಬರೂ ಬಂದಿದ್ದರು. ಸಭಾಂಗಣದ ಮುಂಭಾಗದಲ್ಲಿ ಇಬ್ಬರೂ ಮುಖಾಮುಖಿಯಾದರು.

‘ಬನ್ನಿ ಚೇಂಬರ್​ಗೆ ಹೋಗೋಣ‘ ಎಂದು ಎಂ.ಬಿ. ಪಾಟೀಲ ಅವರು ಡಿ.ಕೆ. ಸುರೇಶ್ ಕೈ ಹಿಡಿದು ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ, ಸುರೇಶ್ ಮತ್ತೆ ಗುರಾಯಿಸಿದ್ದಾರೆ. ನಂತರ ಎಂ.ಬಿ. ಪಾಟೀಲ ಅವರು ಕೈಬಿಟ್ಟು, ಆ ಮೇಲೆ ಮಾತನಾಡುವೆ ಎಂದು ಅಲ್ಲಿಂದ ತೆರಳಿದರು.

ADVERTISEMENT

ಡಿ.ಕೆ. ಸುರೇಶ್‌ ವರ್ತನೆಗೆ ಕೆಲವು ಶಾಸಕರು ಅಚ್ಚರಿ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಗನ್ ಮ್ಯಾನ್‌ಗಳು, ಶಾಸಕರ ಆಪ್ತ ಸಹಾಯಕರು ಗಾಬರಿಯಾದರು.

ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಸುರೇಶ್‌, ‘ಈ ಹಿಂದೆ ಸಿದ್ದರಾಮಯ್ಯ ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಮುಂದೆ ಐದು ವರ್ಷ ಬೇಕಾದರೂ ಮುಖ್ಯಮಂತ್ರಿ ಆಗಿರಲಿ. ಬೇಡ ಅಂದವರು ಯಾರು ? ಎಂ.ಬಿ. ಪಾಟೀಲ ಕೂಡ ಮುಖ್ಯಮಂತ್ರಿ ಆಗಲಿ ಬಿಡಿ’ ಎಂದರು.

ಎಂ.ಬಿ. ಪಾಟೀಲರಿಗೆ ಎಚ್ಚರಿಕೆ ನೀಡಿದ ಬಗ್ಗೆ ಕೇಳಿದಾಗ, ‘ನಾನು ಯಾಕೆ ಅವರನ್ನು ಹೆದರಿಸಲಿ. ನಾನೇನು ಹಾಗೆ ಅಂದಿಲ್ಲ‘ ಎಂದರು.

‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿರಲಿದ್ದಾರೆ’ ಎಂದು ಸಚಿವ ಎಂ.ಬಿ. ಪಾಟೀಲ ಅವರು ಸೋಮವಾರ ನೀಡಿದ್ದ ಹೇಳಿಕೆ ಕಾಂಗ್ರೆಸ್‌ನಲ್ಲಿ ತಲ್ಲಣ ಮೂಡಿಸಿತ್ತು. ‘ನಾನು ಎಂ.ಬಿ. ಪಾಟೀಲ‌ರಿಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ, ಈಗ ಅದು ಬೇಡ‘ ಎಂದು ಡಿ.ಕೆ. ಸುರೇಶ್‌ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.