ADVERTISEMENT

ಈಶ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಡಿಕೆಶಿ ಭಾಗಿ: AICC ಕಾರ್ಯದರ್ಶಿ ಮೋಹನ್‌ ಆಕ್ಷೇಪ

ರಾಹುಲ್ ಗಾಂಧಿಯನ್ನು ಅಣಕಿಸಿದ ವ್ಯಕ್ತಿಯ ಕಾರ್ಯಕ್ರಮದಲ್ಲಿ ಭಾಗಹಿಸಿದರೆ ತಪ್ಪು ಸಂದೇಶ: ಪಿ.ವಿ ಮೋಹನ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 14:17 IST
Last Updated 26 ಫೆಬ್ರುವರಿ 2025, 14:17 IST
ಪಿ.ವಿ.ಮೋಹನ್‌
ಪಿ.ವಿ.ಮೋಹನ್‌   

ಮಂಗಳೂರು: ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ನಡೆಯುವ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾಗವಹಿಸುವುದು ಸರಿಯಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಡಿ.ಕೆ.ಶಿವಕುಮಾರ್‌ ಜಾತ್ಯತೀತ ಪಕ್ಷವೊಂದರ ಅಧ್ಯಕ್ಷ ಹಾಗೂ ಜಾತ್ಯತೀತ ಸರ್ಕಾರದಲ್ಲಿ ಉಪಮುಖ್ಯಮಂತ್ರಿ. ಸದ್ಗುರು ಜಗ್ಗಿ ವಾಸುದೇವ್‌ ಅವರು ಸಂದರ್ಶನವೊಂದರಲ್ಲಿ, ‘ರಾಹುಲ್ ಗಾಂಧಿ ಯಾರು? ಅವರು ಯಾರೆಂದೇ ಗೊತ್ತಿಲ್ಲ’ ಎಂದು ಅಣಕಿಸಿದ್ದರು. ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಪೂರಕವಾದ ದೃಷ್ಟಿಕೋನ ಹೊಂದಿರುವ ವ್ಯಕ್ತಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಭಾಗವಹಿಸುವುದರಿಂದ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಪಿ.ವಿ.ಮೋಹನ್‌ ತಮ್ಮ ಫೇಸ್‌ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ಆರ್‌ಎಸ್‌ಎಸ್‌ ಹಿನ್ನೆಲೆಯ ಹಲವಾರು ವ್ಯಕ್ತಿಗಳಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅವರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಒಬ್ಬರು. ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಅಮಿತ್ ಶಾ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ಹಾಗೂ ರಾತ್ರಿ ಇಡೀ ಅವರ ಜೊತೆ ಇರುವುದನ್ನು ಅರ್ಥೈಸಿಕೊಳ್ಳುವುದು ಕಠಿಣ’ ಎಂದು ಅವರು ಬರೆದುಕೊಂಡಿದ್ದಾರೆ.  

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿ.ವಿ.ಮೋಹನ್‌, ‘ಹಿಂದೂ ಆಚರಣೆಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಈಚೆಗೆ ಅವರು ಕುಂಭ ಮೇಳದಲ್ಲಿ ಭಾಗವಹಿಸಿದ್ದಕ್ಕೆ ಯಾರೂ ಟೀಕೆ ಮಾಡಿಲ್ಲ. ರಾಹುಲ್‌ ಗಾಂಧಿ ಅವರನ್ನು ಅಣಕಿಸಿದ ವ್ಯಕ್ತಿಯ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಭಾಗವಹಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಡಿ.ಕೆ.ಶಿವಕುಮಾರ್‌ ನಮ್ಮ ನಾಯಕರು. ಅವರ ಜೊತೆ ನಾನು ಕೆಲಸ ಮಾಡಿದ್ದೇನೆ. ಅದು ಬೇರೆ ವಿಚಾರ. ಆದರೆ ಪಕ್ಷದ ಸಿದ್ಧಾಂತದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಅವರು ಕೆಪಿಸಿಸಿ ಅಧ್ಯಕ್ಷರು. ಅವರ ನಡವಳಿಕೆಯೂ ಅದಕ್ಕೆ ತಕ್ಕಂತೆ ಇರಬೇಕು. ಪಕ್ಷವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ಸದ್ಗುರು ಜಗ್ಗಿ ವಾಸುದೇವ್ ಅವರು ಕಳುಹಿಸಿಸಿದ್ದ ಆಹ್ವಾನ ಪತ್ರವನ್ನು ಡಿ.ಕೆ.ಶಿವಕುಮಾರ್‌ ಅವರು ತಮ್ಮ ಫೇಸ್‌ ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು. 'ಕೊಯಮತ್ತೂರಿನ ಈಶ ಯೋಗಕೇಂದ್ರದಲ್ಲಿ ನಡೆಯಲಿರುವ ಮಹಾ ಶಿವರಾತ್ರಿ ಕಾರ್ಯಕ್ರಮಕ್ಕೆ ಬರುವಂತೆ ಸದ್ಗುರು ಜಗ್ಗಿ ವಾಸುದೇವ್ ಅವರು ಆಹ್ವಾನಿಸಿದ್ದು, ಈ ಮಹೋನ್ನತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಗೂ ಭಕ್ತಿ-ಭಾವಗಳಲ್ಲಿ ಮಿಂದೇಳಲು ಉತ್ಸುಕನಾಗಿದ್ದೇನೆ’ ಎಂದು ಬರೆದುಕೊಂಡಿದ್ದರು. ಇದನ್ನು ಟ್ಯಾಗ್‌ ಮಾಡಿ ಪಿ.ವಿ ಮೋಹನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.