ADVERTISEMENT

ಕೊರೊನಾ ಸಾಂತ್ವನ | ವೈದ್ಯಕೀಯ ಸಮಸ್ಯೆಗೆ ಯೋಜನೆ ರೂಪಿಸಿ

ಡಾ.ಸುಂದರ್‌ ನಾಗ್‌
Published 28 ಏಪ್ರಿಲ್ 2020, 15:57 IST
Last Updated 28 ಏಪ್ರಿಲ್ 2020, 15:57 IST
ಡಾ. ಸುಂದರ್‌ ನಾಗ್‌
ಡಾ. ಸುಂದರ್‌ ನಾಗ್‌   

ತೀವ್ರ ಸ್ವರೂಪದ ವೈದ್ಯಕೀಯ ತೊಂದರೆಗಳಾದ ಕ್ಯಾನ್ಸರ್‌, ಶ್ವಾಸಕೋಶದ ತೊಂದರೆ, ಡಯಾಲಿಸಿಸ್ ರೋಗಿಗಳು, ನರ ರೋಗಿಗಳು, ಅಂಗಾಂಗಗಳನ್ನು ಕಸಿ ಮಾಡಿಸಿಕೊಂಡವರು, ಉಪಶಮನದ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಕೋವಿಡ್‌–19 ಪಿಡುಗಿನಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೊನಾ ಸೋಂಕು ಮಾರಕವಾಗಬಹುದು.

ವೈದ್ಯಕೀಯ ತೊಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವೇದನೆಯನ್ನು ನೀಡುತ್ತದೆ. ಅದರಲ್ಲೂ ಕೊರೊನಾ ಸೋಂಕಿನಿಂದಾಗಿ ಮಾಡಿರುವ ದೈಹಿಕ ಅಂತರ ಮತ್ತು ಲಾಕ್‌ಡೌನ್‌ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾನಸಿಕ ಒತ್ತಡವನ್ನು ಹೆಚ್ಚಿಸಿದೆ.

ಮಾನಸಿಕ ಒತ್ತಡಕ್ಕೆ ಒಳಗಾಗಿರುವವರಲ್ಲಿ ಈ ಕೆಳಗಿನ ನಕಾರಾತ್ಮಕ ಭಾವನೆಗಳನ್ನು ಗುರುತಿಸಬಹುದು:

ADVERTISEMENT

*ನನಗೆ ಕೊರೊನಾ ಬಂದೇ ಬರುತ್ತದೆ.

*ದೈಹಿಕ ತೊಂದರೆ ಜಾಸ್ತಿಯಾದರೆ ನನಗೆ ಚಿಕಿತ್ಸೆ ದೊರೆಯುವುದಿಲ್ಲ.

*ನನಗೆ ನೋವು ಜಾಸ್ತಿಯಾದರೆ ತಡೆಯಲು ಶಕ್ತಿ ಇಲ್ಲ.

*ಮಕ್ಕಳು ಮತ್ತು ಬಂಧುಗಳು ಬಳಿ ಬಂದಿರಲು ಸಾಧ್ಯವಿಲ್ಲ

*ನನ್ನ ಕಾಯಿಲೆ ಜಾಸ್ತಿಯಾದರೆ ಯಾರೂ ಜೊತೆಯಲ್ಲಿ ಇರುವುದಿಲ್ಲ.

*ನಾನು ಮತ್ತು ಹೆಂಡತಿ ಇಬ್ಬರಿಂದ ಏನು ಮಾಡಲೂ ಸಾಧ್ಯವಿಲ್ಲ.

*ನಾವು ಯಾರ ಸಹಾಯವನ್ನೂ ಕೇಳಲು ಸಾಧ್ಯವಿಲ್ಲ.

*ನಾನು ಒಂಟಿಯಾಗಿದ್ದೇನೆ.

ಮಾನಸಿಕ ಒತ್ತಡ ಇರುವವರ ಲಕ್ಷಣಗಳು

*ಭರವಸೆ ನೀಡಿದ ನಂತರವೂ ಸೋಂಕು ತಗುಲಿಬಿಡುತ್ತದೆ ಎಂಬ ಆತಂಕ.

*ಅಸ್ವಸ್ಥರಂತೆ ಭಾವಿಸುವುದು.

*ಕೂತಲ್ಲಿ ಕೂರಲಾರದೆ ಬೇಗನೆ ಕೋಪಗೊಳ್ಳುವುದು ಮತ್ತು ಕಿರಿಕಿರಿ ಮಾಡುವುದು.

*ಪ್ರತ್ಯೇಕವಾಗಿರುವುದಕ್ಕೆ, ಕುಟುಂಬದ ಸದಸ್ಯರನ್ನು ಹಾಗೂ ಸ್ನೇಹಿತರನ್ನು ಭೇಟಿ ಮಾಡಲಾಗದಿರುವುದಕ್ಕೆ ವಿಷಾದ ಮತ್ತು ಕೋಪ ವ್ಯಕ್ತಪಡಿಸುವುದು.

*ಕುಟುಂಬದ ಸೋಂಕು ನಿಯಂತ್ರಣ ನಿಯಮಗಳ ಬಗ್ಗೆ ತೀವ್ರ ಆತಂಕ.

*ಕೋವಿಡ್– 19ರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಯ ಮೇಲೆ ಹೆಚ್ಚಿನ ಗಮನಹರಿಸುವುದು.

*ಸರಿಯಾಗಿ ನಿದ್ರೆ ಮಾಡದಿರುವುದು.

ಆತಂಕದಿಂದ ಪಾರಾಗುವುದು ಹೇಗೆ ?

1. ಗುರುತಿಸಿ: ಆತಂಕ ಉಂಟುಮಾಡುವ ಯೋಚನೆಯನ್ನು ಗುರುತಿಸಿ ಆದ್ಯತೆಯ ಪ್ರಕಾರ ಪ್ರತ್ಯೇಕವಾಗಿ ವಿಂಗಡಿಸಿ.

2. ಹಂಚಿಕೊಳ್ಳಿ: ನಿಮ್ಮ ಯೋಚನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಡಿಪಾಯ ಇಲ್ಲದಿರುವ ಯೋಚನೆಗಳನ್ನು ಅವರು ಗುರುತಿಸಬಹುದು.

3. ಯೋಜನೆ ರೂಪಿಸಿ: ಆಸ್ಪತ್ರೆಗೆ ತರಾತುರಿಯಲ್ಲಿ ಭೇಟಿ ನೀಡಬೇಕಾದ ಸನ್ನಿವೇಶವನ್ನು ಎದುರಿಸಲು ಮುಂಚಿತವಾಗಿಯೇ ಯೋಜನೆ ರೂಪಿಸಿಕೊಳ್ಳಿ. ಆ್ಯಂಬುಲೆನ್ಸ್, ನಿಮ್ಮ ಇಬ್ಬರು– ಮೂವರು ಸ್ನೇಹಿತರ ಮತ್ತು ಕುಟುಂಬ ಸದಸ್ಯರ ದೂರವಾಣಿ ಸಂಖ್ಯೆಯನ್ನು ಬಳಿಯಲ್ಲೇ ಇಟ್ಟುಕೊಳ್ಳಿ. ಅಗತ್ಯವಿದ್ದರೆ ಕೂಡಲೇ ನೆರವು ಬೇಕು ಎಂದು ಕರೆ ಮಾಡಿ.

4. ಆತಂಕ ಉಂಟುಮಾಡುವ ಆಲೋಚನೆ ಕಡಿಮೆ ಮಾಡಿ: ನೀವು ಈ ಹಿಂದೆ ಆತಂಕ ಉಂಟುಮಾಡುವ ಸನ್ನಿವೇಶಗಳನ್ನು ಹೇಗೆ ನಿಭಾಯಿಸಿದ್ದೀರಿ ಎಂದು ಯೋಚನೆ ಮಾಡಿ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ.

5. ನೆಮ್ಮದಿ ಹುಡುಕಿ: ಪುಸ್ತಕಗಳನ್ನು ಓದುವುದು, ಮೊಮ್ಮಕಳೊಂದಿಗೆ ಆಟ, ಅಡುಗೆ, ಚಿತ್ರಗಳನ್ನು ಬಿಡಿಸುವುದು. ದೇವರ ಧ್ಯಾನ, ಅಧ್ಯಾತ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

(ಲೇಖಕರು ಸಹಪ್ರಾಧ್ಯಾಪಕ ಮನೋವೈದ್ಯಕೀಯ ವಿಭಾಗ, ನಿಮ್ಹಾನ್ಸ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.