
ಬೆಳಗಾವಿ ಸುವರ್ಣ ಸೌಧ
ಬೆಂಗಳೂರು: ಮನೆ ಕೆಲಸದವರಿಗೆ ಕನಿಷ್ಠ ವೇತನ, ವಾರಕ್ಕೆ 48 ಗಂಟೆ ದುಡಿಮೆ, ಒ.ಟಿ , ವಾರಕ್ಕೊಂದು ರಜೆ, ವಿಶ್ರಾಂತಿ, ವಾರ್ಷಿಕ ರಜೆ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಉದ್ದೇಶದ ‘ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ– 2025’ ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಉದ್ದೇಶಿತ ಮಸೂದೆಯು ರಾಜ್ಯದಲ್ಲಿ ಅಧಿಸೂಚಿತವಾಗಿರುವ ಎಲ್ಲ ನಗರ ಪಾಲಿಕೆಗಳಿಗೆ ಅನ್ವಯ ಆಗಲಿದ್ದು, ಮಸೂದೆಯ ಕರಡನ್ನು ಸಿದ್ಧಪಡಿಸಲಾಗಿದೆ.
ಮನೆ ಕೆಲಸದವರ ಕಲ್ಯಾಣಕ್ಕಾಗಿ ವಿಶೇಷ ಮಂಡಳಿ ಮತ್ತು ನಿಧಿ ಸ್ಥಾಪಿಸುವ ಬಗ್ಗೆಯೂ ಮಸೂದೆಯಲ್ಲಿ ಪ್ರಸ್ತಾವವಿದೆ. ಕಲ್ಯಾಣ ನಿಧಿಗೆ ಮನೆ ಕೆಲಸದವರು, ಉದ್ಯೋಗದಾತರು, ಮನೆ ಕೆಲಸದವರನ್ನು ಪೂರೈಸುವ ಏಜೆನ್ಸಿಗಳು ನೀಡುವ ಅಥವಾ ಪಡೆಯುವ ಸಂಭಾವನೆಯ ಶೇ 5ರಷ್ಟು ಪಾವತಿಸಬೇಕಾಗುತ್ತದೆ ಎಂಬ ಅಂಶ ಈ ಮಸೂದೆಯಲ್ಲಿದೆ.
ಅಲ್ಲದೆ, ಮನೆ ಕೆಲಸದವರ ಸುರಕ್ಷತೆ ನಿಯಮಗಳ ಅಡಿ ಸಂಗ್ರಹಿಸಲಾಗುವ ಎಲ್ಲ ದಂಡಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿದ ಅನುದಾನಗಳು, ಮಂಡಳಿ ಮಾಡಿದ ಬ್ಯಾಂಕ್ ಹೂಡಿಕೆಗಳಿಂದ ಗಳಿಸಿದ ಬಡ್ಡಿ ಆದಾಯಗಳು, ಮನೆ ಕೆಲಸದವರ, ಉದ್ಯೋಗದಾತರ ನೋಂದಣಿಯ ಶುಲ್ಕವೂ ಈ ಕಲ್ಯಾಣ ನಿಧಿಗೆ ಜಮೆ ಆಗಲಿದೆ.
ಮನೆ ಕೆಲಸದವರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲು ರೂಪಿಸಿರುವ ಈ ಕರಡು ಮಸೂದೆಯು ಲಿಖಿತ ಒಪ್ಪಂದ, ಕಡ್ಡಾಯ ನೋಂದಣಿ, ಕನಿಷ್ಠ ವೇತನ, ನಿಗದಿತ ಕೆಲಸದ ಸಮಯ, ವಾರದ ರಜೆ, ಹೆರಿಗೆ ರಜೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ನೋಂದಣಿ: ಮಸೂದೆಯ ಪ್ರಕಾರ, ಉದ್ಯೋಗದಾತರು, ಸೇವಾ ಪೂರೈಕೆದಾರರು ಹಾಗೂ ರಾಜ್ಯದ ಒಳಗೆ ಮನೆ ಕೆಲಸ ಮಾಡುವ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು.
ಡಿಜಿಟಲ್ ಪೋರ್ಟಲ್ ಮೂಲಕವೇ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುವುದು. ನೋಂದಣಿ ಮಾಡಿಕೊಳ್ಳದೆ ಮನೆ ಕೆಲಸದವರನ್ನು ನೇಮಕ ಮಾಡಿಕೊಳ್ಳುವಂತಿಲ್ಲ. ನೋಂದಣಿ ಮಾಡಿಕೊಂಡರೂ ಕಾಲ ಕಾಲಕ್ಕೆ ನವೀಕರಿಸದಿದ್ದರೆ ಉದ್ಯೋಗದಾತರಿಗೆ ಆರಂಭಿಕ ಹಂತದಲ್ಲಿ ದಂಡ, ಆ ನಂತರ ಸೆರೆವಾಸ ವಿಧಿಸಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಗೃಹ ಕಾರ್ಮಿಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಶಿಕ್ಷೆಗಳಿರಲಿವೆ.
‘ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ’ಯ ಬಗ್ಗೆ ಮನೆ ಕೆಲಸದವರ ಸಂಘಟನೆಗಳ ಒಕ್ಕೂಟದೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಚರ್ಚೆ ನಡೆಸಿದ್ದರು. ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಅಗತ್ಯವಾದ ವೆಚ್ಚವನ್ನು ಕಾರ್ಮಿಕರು ಮತ್ತು ಮಾಲೀಕರಿಂದ ಭರಿಸುವ ಪ್ರಸ್ತಾವ ಕೈಬಿಡುವುದಾಗಿ ಅವರು ಭರವಸೆ ನೀಡಿದ್ದರು. ಸಚಿವರು ಮಸೂದೆಯನ್ನು ಅಂಗೀಕರಿಸುವಾಗ ಈ ವಾಗ್ದಾನವನ್ನು ಉಳಿಸಿಕೊಳ್ಳಬೇಕು ಎಂದು ಒಕ್ಕೂಟದ ಸಂಚಾಲಕಿ ಜಬೀನಾಖಾನಂ ಆಗ್ರಹಿಸಿದ್ದಾರೆ. ಹುಸಿಯಾಗದಿರಲಿ ಭರವಸೆ ‘ಮನೆ ಕೆಲಸದವರಿಗೆ ಹೊರೆಯಾಗಬಾರದು ಎಂಬ ಸರ್ಕಾರದ ನಿಲುವು ಸರಿಯಾಗಿದೆ. ಈ ಬಗ್ಗೆ ಮನೆ ಕೆಲಸದವರೊಂದಿಗೆ ಚರ್ಚೆ ಮಾಡುವಾಗ ನೀಡಿರುವ ಮಾಹಿತಿ ಕರಡಿನಲ್ಲಿರುವ ವಿವರಗಳು ಮನೆ ಕೆಲಸದವರ ಅಭಿವೃದ್ಧಿಗೆ ಪೂರಕವಾಗಿವೆ. ಮಸೂದೆ ಅಂಗೀಕಾರವಾಗುವ ಹೊತ್ತಿನಲ್ಲಿ ಅವುಗಳನ್ನು ಬದಲಾಯಿಸಬಾರದು. ಕರಡಿನಲ್ಲಿ ಇರುವ ಮತ್ತು ನೀಡಿರುವ ಭರವಸೆಗಳು ಹುಸಿಯಾಗದಂತೆ ನೋಡಿಕೊಳ್ಳಬೇಕು’ ಎಂದು ಒಕ್ಕೂಟದ ಸದಸ್ಯ ಕರಿಬಸಪ್ಪ ಎಂ. ತಿಳಿಸಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರವು ಮುಂದಾಗಿದೆ. ಅದಕ್ಕಾಗಿ ಕರಡು ಮಸೂದೆ ತಯಾರಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ್ ಜಿ. ಮಾಹಿತಿ ನೀಡಿದ್ದಾರೆ. ಮನೆ ಕೆಲಸದವರ ಕುಂದುಕೊರತೆಗಳನ್ನು ಪರಿಹರಿಸುವುದಕ್ಕಾಗಿ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.
* ಮನೆ ಕೆಲಸದವರ ಚಿಕಿತ್ಸಾ ವೆಚ್ಚ
* ಮಕ್ಕಳ ವಿದ್ಯಾಭ್ಯಾಸದ ವೆಚ್ಚ
* ಅಪಘಾತ ಸಂಭವಿಸಿದರೆ ಪರಿಹಾರ
* ಇಬ್ಬರು ಮಕ್ಕಳಿಗೆ ಸೀಮಿತಗೊಳಿಸಿ ವೇತನ ಸಹಿತ ಮಾತೃತ್ವ ರಜೆ
* ಮರಣ ಹೊಂದಿದರೆ ಅಂತ್ಯಕ್ರಿಯೆಗೆ ಸಹಾಯಧನ
* ನಿವೃತ್ತಿ ಹೊಂದಿದರೆ ಪಿಂಚಣಿಗೆ ಅವಕಾಶ
* ಲೈಂಗಿಕ ಶೋಷಣೆ ಕಳ್ಳಸಾಗಣೆಗೆ ತಡೆ
* ಜಾತಿ ಲಿಂಗ ವರ್ಗ ಜನಾಂಗ ಧರ್ಮ ಪ್ರದೇಶದ ಆಧಾರದಲ್ಲಿ ತಾರತಮ್ಯಕ್ಕೆ ತಡೆ
* ಪ್ರತಿ ನೋಂದಾಯಿತ ಘಟಕಕ್ಕೆ ವಿಶಿಷ್ಠ ಗುರುತಿನ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.