ADVERTISEMENT

ಗೋಮಾತೆ ಬಗ್ಗೆ ಮಾತಾಡವ್ರು ಸಗಣಿ ಎತ್ತಿದ್ದಾರಾ: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 12:20 IST
Last Updated 22 ನವೆಂಬರ್ 2018, 12:20 IST
   

ಹೂವಿನಹಡಗಲಿ: ‘ಗೋಮಾತೆ, ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಎಂದಾದ್ರೂ ಸಗಣಿ ಎತ್ತಿದ್ದಾರಾ?’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದರು.

ತಾಲ್ಲೂಕಿನ ಪಶ್ಚಿಮ ಕಾಲ್ವಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಗೋಮಾತೆಯ ನಿಜವಾದ ಸೇವಕರು ನೀವು (ರೈತರು). ನೀವು ಬರೀ ಸಗಣಿ ಮಾತ್ರ ಎತ್ತುತ್ತಿದ್ದೀರಿ, ಆದ್ರೆ, ತುಪ್ಪ ತಿನ್ನುವವರು ಮಾತ್ರ ಗೋಮಾತೆ ಹೆಸರೇಳಿಕೊಂಡು ರಾಜಕಾರಣ ಮಾಡುವವರು’ ಎಂದು ಹೇಳಿದರು.

‘ಸ್ವಾರ್ಥಕ್ಕಾಗಿ ಕೆಲವರು ಗೋಮಾತೆಯ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಅವರಿಗೆ ಗೋವುಗಳ ಬಗ್ಗೆ ನೈಜ ಕಾಳಜಿ ಇಲ್ಲ. ಗೋವುಗಳನ್ನು ಸಾಕುವವರು ಯಾರ್ರೀ, ಸಗಣಿ ಎತ್ತುವವರು ಯಾರ್ರೀ, ಬೆರಣಿ ತಟ್ಟುವವರು ಯಾರ್ರೀ, ಹೊಲಕ್ಕೆ ಗೊಬ್ಬರ ಸುರಿಯುವವರು ಯಾರ್ರೀ’ ಎಂದು ಸಭಿಕರನ್ನು ಕೇಳಿದರು.

ADVERTISEMENT

‘ನಮ್ಮ ಸರ್ಕಾರ ಬರೀ ಬಡವರ ಪರ, ಶೋಷಿತರ ಪರ ಯೋಜನೆಗಳನ್ನು ರೂಪಿಸಿತ್ತು. ನಾನು ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಎಲ್ಲರೂ ಸೇರಿ ಹೊಟ್ಟೆ ಕಿಚ್ಚಿನಿಂದ ನನ್ನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಆಗದಂತೆ ತಡೆದರು’ ಎಂದು ಹೇಳಿದರು.

‘ಜಾತಿ ವ್ಯವಸ್ಥೆಯ ಬಗ್ಗೆ ಅಪಮಾನ ಅನುಭವಿಸಿದ್ದ ಬಸವಣ್ಣ, ಕನಕ, ಅಂಬೇಡ್ಕರರು ಹೊಸ ಸಮಾಜದ ಕನಸು ಕಂಡಿದ್ದರು. ಶರಣರು, ಮಹಾತ್ಮರು ಬೋಧಿಸಿದ ತತ್ವಗಳ ಅಡಿಯಲ್ಲೇ ನಮ್ಮ ಸಂವಿಧಾನ ರೂಪುಗೊಂಡಿದೆ ಎಂದರು.

ಕಾಗಿನೆಲೆ ಕನಕಪೀಠದ ನಿಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಣ್ಯ ಸಚಿವ ಆರ್.ಶಂಕರ್, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.