ADVERTISEMENT

ನಳಿನಿ ಪರ ವಕಾಲತ್ತು ವಹಿಸಿದರೆ ಅಮಾನತು: ಜಿಲ್ಲಾ ವಕೀಲರ ಸಂಘ ನಿರ್ಣಯ

ಸಿ.ಎಸ್.ದ್ವಾರಕಾನಾಥ್‌ ನೇತೃತ್ವದ ತಂಡದಿಂದ ನಳಿನಿ ಪರ ವಕಾಲತ್ತು

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:00 IST
Last Updated 20 ಜನವರಿ 2020, 20:00 IST
ನಳಿನಿ
ನಳಿನಿ   

ಮೈಸೂರು: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದರೆ, ಅಂಥವರನ್ನು ಸಂಘದಿಂದ ಅಮಾನತುಗೊಳಿಸುವುದಾಗಿ ಸೋಮವಾರ ಇಲ್ಲಿ ನಡೆದ ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿತು.

ಆದರೆ, ಈ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿರುವ ಸುಮಾರು 150 ಮಂದಿ ವಕೀಲರು ವಕಾಲತ್ತು ವಹಿಸುವುದಾಗಿ ತಿಳಿಸಿದ್ದಾರೆ. ಮಂಜುಳಾ ಮಾನಸ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಬೆಂಗಳೂರು ವಕೀಲರ ತಂಡದಿಂದ ವಕಾಲತ್ತು: ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಹಿಡಿದು ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಯುವತಿ ಬಿ.ನಳಿನಿ ಹಾಗೂ ಪ್ರತಿಭಟನೆಯ ಆಯೋಜಕರಾದ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಪರವಾಗಿ, ಬೆಂಗಳೂರಿನಿಂದ ಬಂದಿದ್ದ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ನೇತೃತ್ವದ ವಕೀಲರ ತಂಡವು ಸೋಮವಾರ ವಕಾಲತ್ತು ವಹಿಸಿತು.

ADVERTISEMENT

ಆರೋಪಿಗಳ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆನಂದ್‌ಕುಮಾರ್ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು, ವಿಚಾರಣೆಯನ್ನು ಜ. 24ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.