ADVERTISEMENT

ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ತರುವ ಯತ್ನ ನಿಲ್ಲಿಸಿ: ಆದಿಚುಂಚನಗಿರಿ ಶ್ರೀ ತಾಕೀತು

ಉರಿಗೌಡ, ನಂಜೇಗೌಡ ಕುರಿತ ಕುರುಹುಗಳಿಲ್ಲ l ಆದಿಚುಂಚನಗಿರಿ ಮಠದ ಶ್ರೀಗಳ ತಾಕೀತು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 18:42 IST
Last Updated 20 ಮಾರ್ಚ್ 2023, 18:42 IST
ನಿರ್ಮಲಾ ನಂದನಾಥ ಸ್ವಾಮೀಜಿ
ನಿರ್ಮಲಾ ನಂದನಾಥ ಸ್ವಾಮೀಜಿ   

ಮಂಡ್ಯ: ‘ಉರಿಗೌಡ, ದೊಡ್ಡನಂಜೇಗೌಡರ ಕುರಿತ ಚರ್ಚೆಗಳು ಗೊಂದಲ ಸೃಷ್ಟಿಸಿವೆ. ನಿರ್ದಿಷ್ಟ ಸಮುದಾಯದ ಭಾವನೆಗೆ ಧಕ್ಕೆ ತರುವಂತಿವೆ. ಕೂಡಲೇ ಚರ್ಚೆ ನಿಲ್ಲಿಸಬೇಕು‘ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಹೇಳಿದರು.

‘ಸರಿಯಾದ ಸಂಶೋಧನೆಯಾಗದೇ ಎಲ್ಲೆಂದರಲ್ಲಿ ಮಾತನಾಡುವುದು ಸರಿಯಲ್ಲ. ಬಿಜೆಪಿ ಮುಖಂಡ ಸಿ.ಟಿ.ರವಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ ಅವರಿಗೆ ಇತಿಹಾಸದ ಹಿನ್ನೆಲೆ ಮನದಟ್ಟು ಮಾಡಲಾಗಿದೆ. ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆಂದು ಭಾವಿಸುತ್ತೇನೆ’ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ, ನಿರ್ಮಾಪಕ ಮುನಿರತ್ನ ಈ ಬಗ್ಗೆ ಸಿನಿಮಾ ಮಾಡುತ್ತಾರೆಂದು ಗೊತ್ತಾಯಿತು, ಕರೆದು ಮಾತನಾಡಿದ್ದೇನೆ. ಉರಿಗೌಡ, ನಂಜೇಗೌಡರ ವಿಚಾರದಲ್ಲಿ ಯಾವುದೇ ಕುರುಹುಗಳಿಲ್ಲ. ಐತಿಹಾಸಿಕ ಹಿನ್ನೆಲೆ ಸ್ಪಷ್ಟವಿಲ್ಲದ, ಒಂದು ಸಮುದಾಯದ ಅಸ್ಮಿತೆ ಪ್ರತಿನಿಧಿಸುತ್ತಿರುವ ವ್ಯಕ್ತಿಗಳ ಕುರಿತು ಸಿನಿಮಾ ಮಾಡುವುದು ಸರಿಯಲ್ಲವೆಂದು ತಿಳಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ಉರಿಗೌಡ, ದೊಡ್ಡನಂಜೇಗೌಡರ ಬಗ್ಗೆ ಶಾಸನಗಳಿದ್ದರೆ, ಇತಿಹಾಸದ ಸಮರ್ಪಕ ಉಲ್ಲೇಖ ಸಿಕ್ಕಿದರೆ ಮಠಕ್ಕೆ ತಂದು ಒಪ್ಪಿಸಲಿ. ಎಲ್ಲವನ್ನೂ ಕ್ರೋಡಿಕರಿಸಿ, ಪರಿಶೀಲಿಸಿ ನಿರ್ಧಾರಕ್ಕೆ ಬರಲಾಗುವುದು. ಶಾಸನ ಪರಿಶೀಲಿಸುವ ತಾಂತ್ರಿಕ (ಕಾರ್ಬನ್ ಡೇಟಿಂಗ್‌) ವಿಧಾನವಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ತಜ್ಞರಿದ್ದಾರೆ’ ಎಂದರು.

‘ಇತಿಹಾಸ ಅರಿತವನು ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಶಿಲಾ ಶಾಸನಗಳು, ತಾಳೆಗರಿಗಳು ಹಾಗೂ ಆ ಕಾಲಕ್ಕೆ ಸೇರಿದವರ ಬರಹಗಳಿಂದ ಇತಿಹಾಸ ಅರಿಯಬೇಕು’ ಎಂದು ಅವರು ಸ್ಪಷ್ಟಮಾತುಗಳಲ್ಲಿ ಹೇಳಿದರು.

ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ: ಸಚಿವ ಅಶ್ವತ್ಥನಾರಾಯಣ

ಚಿಕ್ಕಬಳ್ಳಾಪುರ: ‘ಉರಿಗೌಡ, ನಂಜೇಗೌಡರ ಅಸ್ತಿತ್ವ, ಅವರ ಹಿರಿಮೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇವರು ಟಿಪ್ಪುವಿನಂತಹ ಮತಾಂಧ ಮತ್ತು ನರಹಂತಕನ ವಿರುದ್ಧ ಹೋರಾಡಿದ್ದರು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮರ್ಥಿಸಿಕೊಂಡಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಅಮರಾವತಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಬೇರೆ ಪಕ್ಷಗಳು ಏನನ್ನಾದರೂ ಹೇಳಲಿ. ಟಿಪ್ಪು ನಮಗೆ ಹೀರೊ ಅಲ್ಲ. ಉರಿಗೌಡ, ನಂಜೇಗೌಡರ ಅಸ್ತಿತ್ವದ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದರು.

ಉರಿಗೌಡ ಗೊತ್ತಿಲ್ಲ, ದೇವೇಗೌಡರು ಗೊತ್ತು: ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ‘ಉರಿಗೌಡ, ನಂಜೇಗೌಡ ಯಾರು ಎಂದು ನನಗೆ ಗೊತ್ತಿಲ್ಲ. ಇತಿಹಾಸದಲ್ಲಿ ಓದಿಲ್ಲ. ನನಗೆ ಮಾಜಿ ಪ್ರಧಾನಿ ದೇವೇಗೌಡರು, ರಂಗೇಗೌಡರು, ನಂಜೇಗೌಡರು ಗೊತ್ತು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಪ್ರತಿಕ್ರಿಯಿಸಿದರು.

‘ದೇಶ ಸೇವೆ ಮಾಡಿದ ಚಾರಿತ್ರಿಕ ವ್ಯಕ್ತಿಗಳಿಗೆ ಗೌರವ, ಮಾನ್ಯತೆ ಕೊಡೋಣ. ಆದರೆ ಗೊತ್ತಿಲ್ಲದ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವು
ದಿಲ್ಲ’ ಎಂದು ಹೇಳಿದರು.

ಗುರುಗಳು ಹೇಳಿದಂತೆ ಕೇಳಬೇಕು: ಬೊಮ್ಮಾಯಿ

ಬೆಂಗಳೂರು: ಉರೀಗೌಡ, ನಂಜೇಗೌಡ ಚಿತ್ರ ಸ್ಥಗಿತದ ಬಗ್ಗೆ ‘ಗುರುಗಳು ಹೇಳಿದಂತೆ ಕೇಳಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುನಿರತ್ನ ಅವರು ಇತಿಹಾಸವನ್ನು ತೆಗೆದುಕೊಂಡು ಚಿತ್ರ ತಯಾರಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲ. ಅವರಲ್ಲಿ ಯಾವ ರೀತಿ ಸಾಹಿತ್ಯ, ಮಾಹಿತಿ ಇದೆ ಎಂಬ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದು ಹೇಳಿದರು.

ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಿತ್ರ ನಿರ್ಮಿಸದಂತೆ ಸೂಚಿಸಿದ್ದಾರೆ ಎಂಬ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ‘ಗುರುಗಳು ಹೇಳಿದಂತೆ ಕೇಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.