ADVERTISEMENT

ಟೋಲ್‌ಗಳಲ್ಲಿ ಶಾಸಕರಿಗೆ ಪ್ರತ್ಯೇಕ ಪಥ ಬೇಕಂತೆ!

ಜೆಡಿಎಸ್ ಶಾಸಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 7:47 IST
Last Updated 16 ಸೆಪ್ಟೆಂಬರ್ 2021, 7:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಾವು ಶಾಸಕರು, ಟೋಲ್‌ಗಳಲ್ಲಿ ನಮ್ಮ ವಾಹನ ತಡೆದು ಗುರುತಿನ ಚೀಟಿ ಕೇಳುವುದೆಂದರೇನು? ನಮಗೇನು ಗೌರವ, ಘನತೆ ಇಲ್ಲವೇ. . .?

ಹೀಗೆಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದು ಜೆಡಿಎಸ್‌ನ ಡಾ. ಕೆ. ಅನ್ನದಾನಿ ಮತ್ತು ಕೆ.ಎಂ.ಶಿವಲಿಂಗೇಗೌಡ. ಗಮನ ಸೆಳೆಯುವ ಸೂಚನೆಯಡಿ ಅನ್ನದಾನಿ ಅವರು, ರಾಜ್ಯದ ಟೋಲ್‌ಗಳಲ್ಲಿ ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಪಥ ಗುರುತಿಸಬೇಕು ಎಂಬ ಬೇಡಿಕೆ ಸಲ್ಲಿಸಿದರು.

‘ನಮ್ಮ ವಾಹನಗಳನ್ನು ಸಾರ್ವಜನಿಕರ ವಾಹನದ ಜತೆಗೆ ಒಯ್ಯಬೇಕು. ವಿಐಪಿ ಪಥ ಇದ್ದರೂ ಎಲ್ಲರನ್ನೂ ಅದರಲ್ಲಿ ಬಿಡುತ್ತಿದ್ದಾರೆ. ನಮ್ಮ ಐಡಿ ಕೇಳುತ್ತಾರೆ. ನಮಗೇನು ಬೆಲೆ ಇಲ್ಲವೇ’ ಎಂದು ಅನ್ನದಾನಿ ಪ್ರಶ್ನಿಸಿದರು.

ADVERTISEMENT

ಇದಕ್ಕೆ ಧ್ವನಿಗೂಡಿಸಿದ ಶಿವಲಿಂಗೇಗೌಡ ಅವರು, ‘ಟೋಲ್‌ಗಳಲ್ಲಿ ನಮಗೆ ಗೌರವ ಸಿಗದಿದ್ದರೆ, ಊರಿನ ಜನ ಏನಂದುಕೊಳ್ಳುತ್ತಾರೆ. ನಮ್ಮ ವಾಹನಗಳಿಗೆ ಎಂಎಲ್‌ಎ ಎಂಬ ಫಲಕ ಇದ್ದರೂ, ವಾಹನದ ಕಿಟಕಿಯಲ್ಲಿ ಬಗ್ಗಿ ಬಗ್ಗಿ ನೋಡುತ್ತಾರೆ. ಇವಕ್ಕೆ ಏನು ಮಾಡೋದು. ಜನಪ್ರತಿನಿಧಿಗಳಿಗೆ ಗೌರವ ಘನತೆ ಇಲ್ಲವೇ. ಪ್ರತ್ಯೇಕ ಪಥ ಮಾಡಲು ಸಾಧ್ಯವಿಲ್ಲದಿದ್ದರೆ, ನಮಗೆ ಕೊಟ್ಟಿರುವ ಪಾಸ್‌ ಹಿಂದಕ್ಕೆ ಪಡೆಯಿರಿ’ ಎಂದು ಖಾರವಾಗಿ ನುಡಿದರು.

ಇಬ್ಬರ ಗದ್ದಲದಿಂದ ಬೇಸತ್ತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ರಾಜ್ಯ ಆರೂವರೆ ಕೋಟಿ ಜನರ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆ ಆಗಬೇಕು. 224 ಶಾಸಕರ ಬಗ್ಗೆ ಅಲ್ಲ. ನಿಮ್ಮ ಸಮಸ್ಯೆಗಳನ್ನು ಸಚಿವರ ಜತೆ ಕೂತು ಚರ್ಚಿಸಿಕೊಳ್ಳಿ’ ಎಂದರು.

ರಾಜ್ಯ ಟೋಲ್‌ಗಳಲ್ಲಿ ಶಾಸಕರಿಗೆ ಉಚಿತವಾಗಿ ಪ್ರಯಾಣಿಸಲು ಪಾಸ್‌ಗಳನ್ನು ನೀಡಲಾಗುತ್ತಿದೆ. ತಡೆ ಇಲ್ಲದೆ ಸಂಚಾರಕ್ಕೆ ಪ್ರತ್ಯೇಕ ಲೇನ್‌ ವ್ಯವಸ್ಥೆ ಮಾಡಬೇಕು ಎಂಬುದು ಶಾಸಕರ ಆಗ್ರಹವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.