ADVERTISEMENT

ಅಕ್ರಮದ ತನಿಖೆಗೆ ಸದನ ಸಮಿತಿ ರಚನೆ

ಶುದ್ಧ ಕುಡಿಯುವ ನೀರಿನ ಘಟಕ–ಸರ್ಕಾರದ ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:58 IST
Last Updated 6 ಮಾರ್ಚ್ 2020, 19:58 IST
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಚರ್ಚೆಯಲ್ಲಿ ತೊಡಗಿದ್ದ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಸಿ.ಟಿ.ರವಿ – ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಚರ್ಚೆಯಲ್ಲಿ ತೊಡಗಿದ್ದ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಸಿ.ಟಿ.ರವಿ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿರುವ 17,154 ನೀರು ಶುದ್ಧೀಕರಣ ಘಟಕಗಳ ನಿರ್ಮಾಣದಲ್ಲಿ ಭಾರಿ ಅಕ್ರಮ ನಡೆದಿದ್ದು, ಇದರ ಕುರಿತು ಸದನ ಸಮಿತಿ ರಚಿಸಲೂ ಸಿದ್ಧ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ರಘುನಾಥರಾವ್ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅವ್ಯವಹಾರದ ಬಗ್ಗೆ ಇಪ್ಸಾನ್‌ ರಿಸರ್ಚ್‌ ಪ್ರೈ.ಲಿ.ಕಂಪನಿಯಿಂದ ಸಮೀಕ್ಷೆ ನಡೆಯುತ್ತಿದೆ, ವರದಿ ಬಂದ ಬಳಿಕ ಹಗರಣವನ್ನು ಸದನ ಸಮಿತಿಗೆ ವಹಿಸುವುದು ಸಹಿತ ವಿರೋಧ ಪಕ್ಷದ ಸದಸ್ಯರ ಸಲಹೆಯಂತೆ ನಡೆದುಕೊಳ್ಳಲಾಗುವುದು ಎಂದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಶಾಸಕರ ನಿಧಿಯಲ್ಲಿ ನೀರಿನ ಘಟಕಗಳ ನಿರ್ವಹಣೆ ಸಾಧ್ಯತೆಯ ಕುರಿತು ಎನ್.ಅಪ್ಪಾಜಿ ಗೌಡ ಸಲಹೆ ನೀಡಿದಾಗ, ಇದನ್ನು ಕೂಡಾ ಕಾರ್ಯರೂಪಕ್ಕೆ ತರಲು ಸರ್ಕಾರ ಮುಕ್ತ ಮನಸ್ಸಿನಿಂದಿದೆ ಎಂದರು.

ADVERTISEMENT

₹ 20 ಲಕ್ಷ: ‘ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲ 6,021 ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದಿಂದ ತಲಾ ₹20 ಲಕ್ಷ ಮಂಜೂರಾಗಿದೆ. ಕಸದ ವ್ಯಾನ್‌ ಖರೀದಿಸಿ ಕಸ ಸಂಗ್ರಹ ಕಾರ್ಯವನ್ನು ಎಲ್ಲ ಗ್ರಾಮ ಪಂಚಾಯಿತಿಗಳೂ ಮಾಡಬಹುದಾಗಿದೆ. ಕನಿಷ್ಠ 3 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಶೇ 100ರಷ್ಟು ನೈರ್ಮಲ್ಯ ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ಪಂಚಾಯಿತಿಯು ರಾಜ್ಯಕ್ಕೆ ಮಾದರಿ ಎಂಬಂತಿದೆ’ ಎಂದು ಸಚಿವ ಈಶ್ವರಪ್ಪ ಹೇಳಿದರು.

12,602:ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು
4,552:ಸ್ಥಗಿತಗೊಂಡಿರುವ ಘಟಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.