ಬೆಂಗಳೂರು: ರೈತರಿಗೆ ಇನ್ನು ಟ್ರ್ಯಾಕ್ಟರ್‌ಗೆ ಡೀಸೆಲ್ ಹೊಂದಿಸುವ, ಚಾಲಕರನ್ನು ಹುಡುಕುವ ತಾಪತ್ರಯ ತಪ್ಪಲಿದೆ. ಹೊಲ ಉಳುಮೆ ಮಾಡಲು, ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ಚಾಲಕ ರಹಿತ ಎಲೆಕ್ಟ್ರಿಕಲ್ ಟ್ರ್ಯಾಕ್ಟರ್‌ಗಳು ಲಭ್ಯವಾಗಲಿವೆ.
‘ಟಫೇ ಇಂಡಿಯಾ ಕಂಪನಿ’ ಇಂತಹ ಟ್ರ್ಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
‘ಟಫೇ ಇವಿ–28’ ಹೆಸರಿನಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ಟ್ರ್ಯಾಕ್ಟರ್ ಅನ್ನು ಹೊಲ, ತೋಟಗಳಲ್ಲಿ ಉಳುಮೆ ಮಾಡಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಟ್ರ್ಯಾಕ್ಟರ್‌ಗೆ ಸೆನ್ಸಾರ್ ಅಳವಡಿಸಲಾಗಿದ್ದು, ಉಳುಮೆ ಮಾಡುವ ಜಾಗದ ಉದ್ದ, ಅಗಲದ ವಿಸ್ತಾರವನ್ನು ನಮೂದಿಸಿ ಬಿಟ್ಟರೆ ಸಾಕು, ನಮೂದಿಸಿದ ಸಮಯ ಮುಗಿಯುವವರೆಗೂ ಸ್ವಯಂ ಕಾರ್ಯ ನಿರ್ವಹಿಸುತ್ತದೆ. ಅಡೆತಡೆಗಳು ಎದುರಾದರೆ ಚಲನೆಯನ್ನು ಸ್ಥಗಿತಗೊಳಿಸುತ್ತದೆ. ತೋಟಗಳಲ್ಲೂ ಮರ, ಗಿಡ, ಕಲ್ಲುಗಳನ್ನು ಗ್ರಹಿಸಿ ಅವುಗಳಿಗೆ ಅಡಚಣೆಯಾಗದಂತೆ ಕೆಲಸ ಮಾಡಲಿದೆ.
27ರಿಂದ 28 ಎಚ್‌ಬಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, ಎಂಟು ಗಂಟೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ರ‍್ಯಾಪಿಡ್ ಚಾರ್ಜಿಂಗ್ ಮೂಲಕ ಒಂದು ತಾಸಿನಲ್ಲೇ ಬ್ಯಾಟರಿ ರೀಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.
ಬೆಳೆ ಕಟಾವಿನ ಯಂತ್ರ ಅಳವಡಿಕೆ:
ಮುಂದೆ ಹಾಗೂ ಹಿಮ್ಮುಖವಾಗಿ ಸರಾಗವಾಗಿ ಚಲಿಸುವ ಈ ಟ್ರ್ಯಾಕ್ಟರ್‌ನ ಮಧ್ಯ ಭಾಗದಲ್ಲಿ ಕಟಾವು ಯಂತ್ರ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರು ಉಳುಮೆಯ ಜತೆಗೆ, ಭತ್ತ, ರಾಗಿ ಮೊದಲಾದ ಬೆಳೆಗಳನ್ನು ಕಟಾವು ಮಾಡಬಹುದು.
ಬಿಸಿಲು ಮಳೆಗೆ ರಕ್ಷಣೆ:
ಬಿಸಿಲು, ಮಳೆಯಿಂದ ರೈತರನ್ನು ಸಂರಕ್ಷಿಸಲು ಕಂಪನಿ ಇತರೆ ಮಾದರಿಯ ಡೀಸೆಲ್ ಟ್ರ್ಯಾಕ್ಟರ್‌ಗಳಿಗೆ ಜೆಸಿಬಿ ಯಂತ್ರಗಳ ಮಾದರಿಯಲ್ಲಿ ಕ್ಯಾಬಿನ್ ಸಿದ್ಧಪಡಿಸಿದೆ. ರೈತರು ಆರಾಮಾಗಿ ಕುಳಿತು ನಿತ್ಯದ ಕೃಷಿ ಕೆಲಸಗಳನ್ನು ನಿರ್ವಹಿಸಬಹುದು. ಹವಾನಿಯಂತ್ರಿತ ಸೌಲಭ್ಯವೂ ಇದೆ.
Highlights - ಉಳುಮೆಯ ಜತೆಗೆ ಬೆಳೆ ಕಟಾವು ಸೌಲಭ್ಯ ಮರ, ಗಿಡ, ಕಲ್ಲು ಗ್ರಹಿಸುವ ಸೆನ್ಸಾರ್ ಅಳವಡಿಕೆ 27ರಿಂದ 28 ಎಚ್‌ಬಿ ಎಂಜಿನ್ ಸಾಮರ್ಥ್ಯ
Cut-off box - ಶತ್ರುಗಳ ಮೇಲೆ ‘ನಿಂಬಸ್’ ಕಣ್ಣು ಗಡಿಯಲ್ಲಿ ಶತ್ರು ಸೈನಿಕರ ಚಲನವಲನ ಭಯೋತ್ಪಾದಕ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡುವಂತಹ ಬಹುಉಪಯೋಗಿ ಎಲೆಕ್ಟ್ರಿಕಲ್ ಡ್ರೋನ್ ಭಾರತೀಯ ಸೇನೆಯ ಮೆಚ್ಚುಗೆ ಪಡೆದಿದೆ. ‘ನ್ಯೂಸ್ಪೇಸ್’ ಕಂಪನಿ ಸಿದ್ಧಪಡಿಸಿರುವ ನಿಂಬಸ್ ಹೆಸರಿನ ಈ ಡ್ರೋನ್ 5 ಕಿ.ಮೀ. ಎತ್ತರದವರೆಗೂ ಹಾರಾಟ ನಡೆಸುತ್ತದೆ. 15 ಕಿ.ಮೀ ದೂರದವರೆಗೂ ಸಾಗಲಿವೆ. ಒಂದು ಕೊಠಡಿಯಲ್ಲಿ ಕುಳಿತು ಏಕಕಾಲಕ್ಕೆ ಇಂತಹ 75 ಡ್ರೋನ್‌ಗಳನ್ನು ಹಾರಿಸುವ ನಿಯಂತ್ರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಈ ನಿಂಬಸ್‌ನಲ್ಲಿ ಅಳವಡಿಸಿದ ಕ್ಯಾಮೆರಾಗಳು ಅದರ ಇರುವಿಕೆಯ ಸುತ್ತಲೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಹಗಲು–ರಾತ್ರಿಯಲ್ಲೂ ಸ್ಪಷ್ಟ ಚಿತ್ರಗಳನ್ನು ಕಂಪ್ಯೂಟರ್‌ಗೆ ರವಾನಿಸುತ್ತವೆ. ಶತ್ರುಗಳಿಗೆ ತನ್ನ ಇರುವಿಕೆ ತಿಳಿಯದಷ್ಟು ಸೂಕ್ಷ್ಮ ಶಬ್ದತರಂಗಗಳ ವ್ಯವಸ್ಥೆ ಹೊಂದಿದೆ. ಜತೆಗೆ 30ರಿಂದ 40 ಕೆ.ಜಿ. ತೂಕದ ಸಾಮಗ್ರಿಗಳನ್ನು ಹೊತ್ತಯ್ಯಬಲ್ಲವು. ಗಡಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಬಳಸಲು ಭಾರತೀಯ ಸೇನೆ ಒಪ್ಪಂದ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.