ADVERTISEMENT

ಜಾತ್ಯತೀತ ಪದ ಕೈಬಿಡಲು ಸಂವಿಧಾನಕ್ಕೆ ತಿದ್ದುಪಡಿ ತನ್ನಿ: ವೀರಪ್ಪ ಮೊಯಿಲಿ ಸವಾಲು

ಬಿಜೆಪಿಗೆ ವೀರಪ್ಪ ಮೊಯಿಲಿ ಸವಾಲು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 16:02 IST
Last Updated 23 ಸೆಪ್ಟೆಂಬರ್ 2023, 16:02 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಮಂಗಳೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಮಾಜವಾದ ಹಾಗೂ ಜಾತ್ಯತೀತ ಪದಗಳನ್ನು ಕದ್ದುಮುಚ್ಚಿ ಅಳಿಸುವ ಷಡ್ಯಂತ್ರ ಮಾಡುವುದು ಬೇಡ. ಅವರಿಗೆ ಧಮ್ಮಿದ್ದರೆ, ತಾಕತ್ತು ಇದ್ದರೆ, ವಿಶೇಷ ಅಧಿವೇಶನ ಕರೆದು ಸಂವಿಧಾನ ತಿದ್ದುಪಡಿಯ ಮೂಲಕವೇ ಅದನ್ನು ಜಾರಿಗೊಳಿಸಲಿ’ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಸವಾಲು ಹಾಕಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸಂವಿಧಾನದಲ್ಲಿರುವ ಶಬ್ದಗಳನ್ನು ಕಿತ್ತು ಹಾಕುವ ಕೆಲಸ ಮಾಡುವವರು ಸಂವಿಧಾನ ವಿರೋಧಿಗಳು. ಸಂವಿಧಾನ ವಿರೋಧಿ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದರು.

‘ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ರಾಜ್ಯಕ್ಕೆ ನ್ಯಾಯಯುತವಾಗಿ ದಕ್ಕ ಬೇಕಾದಷ್ಟು ನೀರು ಹಂಚಿಕೆ ಆಗದಿರುವುದಕ್ಕೆ ಅನೇಕ ಕಾರಣಗಳಿವೆ. ಕಾವೇರಿ ಜಲಾನಯನ ಪ್ರದೇಶದ ಬಾಗೂರು ನವಿಲೆ, ಯಗಚಿ ಮುಂತಾದ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೆಲವು ನಾಯಕರೇ ಅಡ್ಡಗಾಲು ಹಾಕಿದ್ದೂ ಇದಕ್ಕೆ ಕಾರಣ. ಮಳೆ ಬಂದರೆ ಕಾವೇರಿ ವಿವಾದ ತನ್ನಿಂದ ತಾನೆ ತಣ್ಣಗಾಗುತ್ತದೆ. ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದಕ್ಕೂ ‘ಇಂಡಿಯಾ’ ಒಕ್ಕೂಟಕ್ಕೂ ಸಂಬಂಧವಿಲ್ಲ’ ಎಂದರು. 

ADVERTISEMENT

‘ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿರುವುದು ಬಿಜೆಪಿಯ ಕಪಟ ನಾಟಕ. ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದರೂ ಮಹಿಳೆಯರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೀಸಲಾತಿ ಸಿಗುವುದಿಲ್ಲ. 2024ರಲ್ಲಿ ಅವರ ಪಕ್ಷ ಅಧಿಕಾರಕ್ಕೇ ಬರುವುದಿಲ್ಲ. ಗೊಲ್ವಾಲ್ಕರ್‌ ಆದಿಯಾಗಿ ಬಿಜೆಪಿಯ ತತ್ವದ ಮೂಲ ಪ್ರತಿಪಾದಕರು ಶೂದ್ರರಿಗೆ ಮತ್ತು ಮಹಿಳೆಯರಿಗೆ ಮತದಾನದ ಹಕ್ಕು ನೀಡುವುದನ್ನೇ ವಿರೋಧಿಸಿದ್ದರು. ಮಹಿಳೆ ಪಾಪಿಷ್ಟೆ ಎಂಬ ಮನುವಾದದ ಸಿದ್ಧಾಂತವನ್ನು ಒಪ್ಪುವ ಅವರು ಮಹಿಳೆಯರಿಗೆ ಪ್ರಮುಖ ಸ್ಥಾನ ಮಾನ ನೀಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಜೆ.ಆರ್‌.ಲೋಬೊ, ಐವನ್‌ ಡಿಸೋಜ, ಶಶಿಧರ ಹೆಗ್ಡೆ, ಕೃಪಾ ಆಳ್ವ, ಟಿ.ಕೆ.ಸುಧೀರ್‌, ಜೋಕಿಂ ಫರ್ನಾಂಡಿಸ್‌, ಶುಭೋದಯ ಆಳ್ವ, ಗಣೇಶ ಪೂಜಾರಿ, ಕರಷ್ಣ ಮೂರ್ತಿ, ಭಾಸ್ಕರ ಮೊಯಿಲಿ ಮತ್ತಿತರರು ಇದ್ದರು.

ಜೆಡಿಎಸ್‌ ಜೊತೆ ಮೈತ್ರಿ– ಉಡ ಹೊಕ್ಕಂತೆ 

ಮಂಗಳೂರು: ‘ಜೆಡಿಎಸ್‌ ಜೊತೆ ಯಾವುದೇ ಪಕ್ಷವು ಮೈತ್ರಿ ಮಾಡಿಕೊಳ್ಳುವುದು ಮನೆಗೆ ಉಡ ಹೊಕ್ಕಂತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ 28ರಲ್ಲಿ ಒಂದು ಸ್ಥಾನ ಮಾತ್ರ ಗೆದ್ದಿತು. ನಾನೂ ಸೋತೆ, ಮಲ್ಲಿಕಾರ್ಜುನ ಖರ್ಗೆಯವರೂ ಸೋತರು. ಈಗ ಆ ಅನಿಷ್ಟ ದೂರವಾಗಿದೆ’ ಎಂದು ವೀರಪ್ಪ ಮೊಯಿಲಿ ಹೇಳಿದರು.

‘ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ದಾರಿದ್ರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ ಅವರಿಗೂ ದಾರಿದ್ರ್ಯ ಬಂದಿದೆಯೇ’ ಎಂದು ಪ್ರಶ್ನಿಸಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಮಗ (ಹರ್ಷ ಮೊಯಿಲಿ) ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.